ಎಚ್‍ಎಎಲ್ ಜೊತೆ ರಫೇಲ್ ಒಪ್ಪಂದ ಪೂರ್ಣವಾಗಿದೆ ಎಂದಿದ್ದ ಡಸಾಲ್ಟ್ ಅಧ್ಯಕ್ಷ: ಆರೋಪ

Update: 2018-09-24 10:17 GMT

ಇದಾಗಿ 17 ದಿನಗಳಲ್ಲೇ ಹೊಸ ಒಪ್ಪಂದ ಘೋಷಿಸಿದ್ದರು ಮೋದಿ

ಹೊಸದಿಲ್ಲಿ, ಸೆ.24: ಫ್ರೆಂಚ್ ಸಂಸ್ಥೆ ಡಸಾಲ್ಟ್ ಏವಿಯೇಶನ್ ಅಧ್ಯಕ್ಷ ಎರಿಕ್ ಟ್ರಾಪ್ಪಿಯರ್ ಅವರು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಜವಾಬ್ದಾರಿ ಹಂಚಿಕೆ ಕುರಿತಂತೆ ಐಎಎಫ್ ಹಾಗೂ ಎಚ್‍ಎಎಲ್ ಅಧಿಕಾರಿಗಳ ಸಮ್ಮುಖ ಮಾರ್ಚ್ 25, 2015ರಂದು ಮಾತನಾಡುತ್ತಿರುವ ವಿಡಿಯೋವೊಂದನ್ನು ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿದೆ.

ಎಚ್‍ಎಎಲ್ ಹೊರತುಪಡಿಸಿ ಹೊಸ ರಫೇಲ್ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಆಗಿನ ಫ್ರೆಂಚ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲೆಂಡ್ ಸಮ್ಮುಖದಲ್ಲಿ ಘೋಷಿಸಿದ ಕೇವಲ 17 ದಿನಗಳ ಮುಂಚೆ ಡಸಾಲ್ಟ್ ಏವ್ಯೇಶನ್ ಅಧ್ಯಕ್ಷ ಎಚ್‍ಎಎಲ್ ಹಾಗೂ ಐಎಎಫ್ ಅಧಿಕಾರಿಗಳನ್ನುದ್ದೇಸಿಸಿ ಮಾತನಾಡಿದ್ದರೆಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.

"ಸಾಕಷ್ಟು ಶ್ರಮ ಹಾಗೂ ಸ್ವಲ್ಪ ಚರ್ಚೆಯ ನಂತರ ಭಾರತೀಯ ವಾಯುಪಡೆಯ ಮುಖ್ಯಸ್ಥ  ತಮಗೆ ರಫೇಲ್ ನಂತಹ ಯುದ್ಧ ವಿಮಾನ ಬೇಕು ಎಂದಿರುವುದು ಹಾಗೂ ಇನ್ನೊಂದೆಡೆ ಎಚ್‍ಎಎಲ್ ಅಧ್ಯಕ್ಷರು ತಾವು ಜವಾಬ್ದಾರಿ ಹಂಚಿಕೆಗೆ ಒಪ್ಪಿದ್ದಾಗಿ ಹಾಗೂ ನಿಯಮದಂತೆ  ಆರ್‍ಎಫ್‍ಪಿ (ರಿಕ್ವೆಸ್ಟ್ ಫಾರ್ ಪ್ರಪೋಸಲ್)ಗೆ ನಾವು ಬದ್ಧರಾಗಿರುವುದು ನಮಗೆ ದೊಡ್ಡ ಸಮಾಧಾನ ನೀಡಿದೆ. ಒಪ್ಪಂದ ಅಂತಿಮಗೊಂಡು ಸಹಿ ಹಾಕುವುದು ಆದಷ್ಟು ಬೇಗ ನಡೆಯುವುದು ಎಂದು ನಾನು ನಂಬಿದ್ದೇನೆ,'' ಎಂದು ಟ್ರಾಪ್ಪಿಯರ್ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.

ಅವರು ಈ  ಮಾತುಗಳನ್ನಾಡಿದ ಕೇವಲ 17 ದಿನಗಳ ನಂತರ, ಎಪ್ರಿಲ್ 10, 2015ರಂದು ಪ್ರಧಾನಿ  ಹೊಸ ರಫೇಲ್ ಒಪ್ಪಂದವನ್ನು ಘೋಷಿಸಿದ್ದರು. ಇದಕ್ಕಿಂತ ಕೇವಲ 12 ದಿನಗಳಿಗೆ ಮುಂಚಿತವಾಗಿ ರಫೇಲ್ ಪ್ರಸ್ತಾವಿತ ಒಪ್ಪಂದದಿಂದ ಎಚ್‍ಎಎಲ್ ಹೊರ ಹೋಗಿ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಒಳ ಬಂದಿತ್ತು.

ಕೃಪೆ: nationalheraldindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News