ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು: ಮಾಜಿ ಸಚಿವೆ ಮೋಟಮ್ಮ

Update: 2018-09-24 12:38 GMT

ಮೂಡಿಗೆರೆ, ಸೆ.24: ದಲಿತ ಮಹಿಳೆಯರ ಸಂಘವು ಬೇರೆ ಯಾವ ಜಿಲ್ಲೆ, ತಾಲೂಕಿನಲ್ಲಿಯೂ ಇಲ್ಲ. ನಮ್ಮ ತಾಲೂಕಿನಲ್ಲಿರುವುದಕ್ಕೆ ಹೆಣ್ಣು ಮಕ್ಕಳು ಹೆಮ್ಮೆ ಪಡಬೇಕು. ಸಂಘ ನಮ್ಮದೆಂಬ ಭಾವನೆಯಿಂದ ಸಂಘವನ್ನು ಬಲಪಡಿಸುವ ಜೊತೆಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಹಾಗೂ ಮಾಜಿ ಸಚಿವೆ ಮೋಟಮ್ಮ ಹೇಳಿದರು. 

ಅವರು ಪಟ್ಟಣದ ಜೇಸಿ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಚೈತನ್ಯ ಪರಿಶಿಷ್ಟ ಜಾತಿ ಮಹಿಳಾ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೆ ಅನೇಕ ಸಮಸ್ಯೆಗಳಿಗೆ ನಮ್ಮ ಹೆಣ್ಣು ಮಕ್ಕಳು ಬೇರೆಯವರ ಬಳಿ ಹೋಗಿ ಕೈ ಚಾಚುವ ಪರಿಸ್ಥಿತಿ ಇತ್ತು. ಆದರೆ ಕಾಲ ಬದಲಾಗಿದೆ. ಸರಕಾರದ ಮಾನ್ಯತೆ ಪಡೆದ ನಮ್ಮ ಸಂಘ ಕಷ್ಟ ಕಾಲಕ್ಕೆ ಅನುಕೂಲವಾಗುತ್ತದೆ. ಸಂಘದಲ್ಲಿ ಸುಮ್ಮನೆ ಸಾಲ ಪಡೆಯಬಾರದು. ಅಗತ್ಯವಿದ್ದರೆ ಮಾತ್ರ ಸಾಲ ಪಡೆದು, ಒಳ್ಳೆಯ ಕಾರ್ಯಕ್ಕೆ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಉನ್ನತ ಸ್ಥಾನಕ್ಕೆ ಬೆಳೆಯಬೇಕೆಂದು ಹೇಳಿದರು.

ತಮ್ಮೆಲ್ಲರ ಸಹಕಾರದೊಂದಿಗೆ ಸಂಘವು ಪ್ರಗತಿ ಪಥದತ್ತ ಸಾಗುತ್ತಾ ಹೊಸ ಅವಿಷ್ಕಾರಗಳು, ಚಿಂತನೆಗಳು ಹಾಗೂ ಅವಕಾಶಗಳಿಗೆ ಮಹಿಳೆಯರು ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕಳೆದ ಮೂರು ವರ್ಷದ ಹಿಂದೆ ಪ್ರಾರಂಭವಾದ ನಮ್ಮ ಸಂಘದಲ್ಲಿ 1324 ಸದಸ್ಯರಿದ್ದಾರೆ. 6,99,000 ರೂ. ಷೇರು ಬಂಡವಾಳ ಹೊಂದಿದೆ. ಸದರಿ ವರ್ಷದಲ್ಲಿ 1,19,15,931 ರೂ ಗಳ ವ್ಯವಹಾರ ಮಾಡಿದೆ. ಒಟ್ಟು ಠೇವಣಿ 25,43,650 ಹೊಂದಿದ್ದು, ಸದರಿ ವರ್ಷದಲ್ಲಿ 24,441 ರೂ ಲಾಭ ಗಳಿಸಿದೆ. ಇನ್ನೂ ಹೆಚ್ಚಿನ ಸದಸ್ಯರು ಸೇರ್ಪಡೆಗೊಳಿಸುವುದರ ಮೂಲಕ ಸಂಘವನ್ನು ಬೆಳೆಸುವ  ಕೆಲಸ ಮಾಡಬೇಕು ಎಂದ ಅವರು, ವಿವಿಧ ಇಲಾಖೆಗಳಲ್ಲಿ ವಿವಿಧ ರೀತಿಯ ಸವಲತ್ತುಗಳು ಸಿಗುತ್ತದೆ. ಅದನ್ನು ಕೂಡ ಬಳಸಿಕೊಳ್ಳಲು ಮಹಿಳೆಯರು ಮುಂದಾಗಬೇಕು ಎಂದು ತಿಳಿಸಿದರು. 

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಯೋಗೇಶ್, ಉಪಾಧ್ಯಕ್ಷೆ ಎಚ್.ಎಂ.ಜಯಲಕ್ಷ್ಮಿ, ನಿರ್ದೇಶಕರಾದ ಎಂ.ಎಚ್.ಸೀತಮ್ಮ, ಲಕ್ಷ್ಮೀರಾಮಯ್ಯ, ನೀಲಾ ಅನಂತ್, ಜಾನಕಿ ರಮೇಶ್, ಪುಷ್ಪ ಕೇಸರಿಕೆ, ರುಕ್ಮಿಣಿ ದೇವರಾಜು, ಸಿ.ಎಂ.ಮಂಜುಳ, ಎಚ್.ಬಿ.ಸರೋಜ ಚಂದ್ರು, ಎಚ್.ಆರ್.ನೀಲಮ್ಮ ಬ್ರಹ್ಮದೇವ್, ಜಯಂತಿ ರಮೇಶ್, ರತ್ನ ರಮೇಶ್, ಸರಸ್ವತಿ ಸಾಗರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News