"ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚಾಗಿ ರಾಜಕಾರಣದಲ್ಲಿ ತೊಡಗಿರುವ ಕುಮಾರಸ್ವಾಮಿ"

Update: 2018-09-24 14:06 GMT

ವಿಜಯಪುರ, ಸೆ. 24: ‘ಸಿಎಂ ಕುಮಾರಸ್ವಾಮಿ ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚಾಗಿ ರಾಜಕಾರಣದಲ್ಲಿ ತೊಡಗಿದ್ದಾರೆ. ಮೈತ್ರಿ ಸರಕಾರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲವೆಂಬ ಭಾವನೆ ರಾಜ್ಯದ ಜನರಿಗೆ ಬಂದಿದೆ’ ಎಂದು ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಜಲಾಶಯ ಭರ್ತಿಯಾಗಿದ್ದರೂ ಮುಖ್ಯಮಂತ್ರಿ ಬಾಗೀನ ಅರ್ಪಿಸಿಲ್ಲ. ಇಂಥ ಭಾವನಾತ್ಮಕ ವಿಷಯಗಳಿಗೆ ಕುಮಾರಸ್ವಾಮಿ ಸ್ಪಂದಿಸದ ಹಿನ್ನೆಲೆಯಲ್ಲಿ ಉ.ಕ.ಭಾಗದ ಜನರಲ್ಲಿ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ ಎಂದು ಹೇಳಿದರು.

ಮೈತ್ರಿ ಸರಕಾರದಲ್ಲಿ ಸಿಎಂ ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ರಾಜ್ಯದ ಇಂದಿನ ಪರಿಸ್ಥಿತಿಗೆ ಅತಂತ್ರ ಫಲಿತಾಂಶವೇ ಕಾರಣ. ಸಿದ್ದರಾಮಯ್ಯ ಅವಧಿಯಲ್ಲಿ ನಡೆಯುತ್ತಿದ್ದ ಕಾಮಗಾರಿಗಳ ವೇಗ ಈಗ ಇಲ್ಲ ಎಂದ ಅವರು, ನಾಳೆ(ಸೆ.25) ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಲಿದ್ದೇನೆ ಎಂದರು.

ಸಿದ್ದರಾಮಯ್ಯ ಸಿಎಂ ಆಗಲಿ: ಕಾಂಗ್ರೆಸ್ ಕಾರ್ಯಕರ್ತರು ಈಗಲೂ ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕೆಂದು ಬಯಸುತ್ತಾರೆ ಎಂದ ಅವರು, ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸಚಿವ ಸ್ಥಾನ ಮತ್ತು ನಿಗಮ ಮಂಡಳಿ ಸ್ಥಾನಗಳು ಸಿಕ್ಕಿಲ್ಲ ಎಂದು ದೂರಿದರು.

ಇಂಡಿ ಕ್ಷೇತ್ರಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಸಂಬಂಧ ನಿನ್ನೆ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಈ ಸಂಬಂಧ ಒತ್ತಾಯ ಕೇಳಿಬಂದಿದೆ. ತಾನೂ ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ತನಗೆ ಸ್ಥಾನ ಸಿಗದಿದ್ದರೂ ಪಕ್ಷದ ಕಾರ್ಯಕರ್ತರಿಗೆ ಸೂಕ್ತ ಸ್ಥಾನ ದೊರೆಯಬೇಕು ಎಂದು ಹೇಳಿದರು.

ಮೈತ್ರಿ ಸರಕಾರದಲ್ಲಿ ನಿರೀಕ್ಷಿತ ಕೆಲಸ ಆಗುತ್ತಿಲ್ಲ. ನಾಲ್ಕು ತಿಂಗಳಲ್ಲಿ ಇಂಡಿ ಮತಕ್ಷೇತ್ರಕ್ಕೆ ಪಿಯು ಕಾಲೇಜು ಮಾತ್ರ ಮಂಜೂರಾಗಿದೆ. ಬರ ಪೀಡಿತ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ವಿಮಾನ ನಿಲ್ದಾಣ ಕಾಮಗಾರಿ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂದು ಅವರು ಟೀಕಿಸಿದರು.

ಅಪರೂಪದ ರಾಜಕಾರಣಿ: ಸಿದ್ದರಾಮಯ್ಯ ರಾಜ್ಯ ಕಂಡ ಅಪರೂಪದ ರಾಜಕಾರಣಿ. ಅವರೊಬ್ಬ ಜನ ನಾಯಕ. ಅರಸು ಬಳಿಕ ಜನರಿಗೆ ಅನುಕೂಲ ಆಗುವ ಯೋಜನೆ ಕೊಟ್ಟವರು ಸಿದ್ದರಾಮಯ್ಯ, ಅವರು ಒಬ್ಬ ವ್ಯಕ್ತಿ ಅಲ್ಲ, ಅವರೊಬ್ಬ ಶಕ್ತಿ ಎಂದು ಯಶವಂತರಾಯಗೌಡ ಪಾಟೀಲ್ ಹಾಡಿ-ಹೊಗಳಿದರು.

ನಾನು ಸಾಯುವವರೆಗೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಯಾವುದೇ ಸಂದರ್ಭದಲ್ಲಿಯೂ ನಾನು ಆಪರೇಷನ್ ಕಮಲಕ್ಕೆ ಬಲಿಯಾಗುವುದಿಲ್ಲ. ನನ್ನನ್ನು ಬಿಜೆಪಿಯವರು ಸಂಪರ್ಕಿಸಿದ್ದಾರೋ ಅಥವಾ ಇಲ್ಲವೋ ಎಂಬ ವಿಚಾರ ಈಗ ಬೇಡ.

-ಯಶವಂತರಾಯಗೌಡ, ಪಾಟೀಲ್ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News