ಬೆಳಗಾವಿಯಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ: ಉದ್ವಿಗ್ನ ಪರಿಸ್ಥಿತಿ

Update: 2018-09-24 14:48 GMT

ಬೆಳಗಾವಿ, ಸೆ.24: ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದ್ದು, ಕೆಲವು ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮುಸ್ಲಿಂ ಬಾಹುಳ್ಯವಿರುವ ವೀರಭದ್ರನಗರದ ಮಸ್ಜಿದ್ ಖೂಬಾದ ಮೇಲೆ ಸೆ.23ರಂದು ತಡರಾತ್ರಿ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆದರೆ, ಗಣೇಶನ ಮೂರ್ತಿ ಮಾಡಿದ್ದ ಪೆಂಡಾಲ್ ಮೇಲೆ ಕಲ್ಲುತೂರಾಟ ನಡೆಸಲಾಗಿದೆ ಎಂದು ಆರೋಪಿಸಿ, ಕಾಮತ್‌ಗಲ್ಲಿಯಲ್ಲಿ ಆಟೋ ಚಾಲಕ ಸಮೀರ್ ಸೌದಾಗರ್ ಎಂಬವರ ಮೇಲೆ ಅನ್ಯ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿದೆ ಎಂದು ತಿಳಿದು ಬಂದಿದೆ.

ವೀರಭದ್ರನಗರ ಹಾಗೂ ಶಿವಾಜಿನಗರದಲ್ಲಿ ಎರಡು ಗಣೇಶಮೂರ್ತಿಯನ್ನು ಕೂರಿಸಲಾಗಿದೆ. ವೀರಭದ್ರನಗರದ ಒಳಗೆ ಗಣೇಶಮೂರ್ತಿಯ ವಿಸರ್ಜನೆ ಮೆರವಣಿಗೆಗೆ ಅವಕಾಶವಿಲ್ಲದಿದ್ದರೂ, ಪೊಲೀಸರ ಸಹಯೋಗದೊಂದಿಗೆ ಒಂದು ಗುಂಪು ಪ್ರವೇಶ ಮಾಡಿದೆ. ಇದೇ ವೇಳೆ ಸ್ಥಳದಲ್ಲಿ ಉದ್ದೇಶಪೂರ್ವಕವಾಗಿ ವಿದ್ಯುತ್ ಕಂಬದ ತಂತಿಗಳನ್ನು ಎಳೆದು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಆನಂತರ ಕಲ್ಲು ತೂರಾಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಆನಂತರ, ಕಾಕರ್ ಮೊಹಲ್ಲಾದಲ್ಲಿ ಅನ್ಯ ಕೋಮಿನ ಯುವಕರ ಗುಂಪೊಂದು ದರ್ಗಾ ಹಾಗೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ. ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಥಳಕ್ಕೆ ಯಾವ ಪೊಲೀಸರೂ ಬಂದಿರಲಿಲ್ಲ. ಆದರೆ, ಘಟನೆ ನಡೆದ ಬಳಿಕ ಮನೆಗಳಿಂದ ಹೊರಗೆ ಬಂದು ನೋಡುತ್ತಿದ್ದಾಗ ಅಮಾಯಕ ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಲ್ಲುತೂರಾಟದಿಂದಾಗಿ ಹಲವರು ಗಾಯಗೊಂಡಿದ್ದು, ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಜರುಗುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಶಾಸಕ ಅನಿಲ್ ಬೆನಕೆ, ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಸೇರಿದಂತೆ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ: ಕಾಕರ್‌ಮೊಹಲ್ಲಾ, ವೀರಭದ್ರನಗರ, ಬಾಷಿಬನ್ ಜಮಾತ್, ಅಸದ್‌ ಖಾನ್ ಸೊಸೈಟಿ ಜಮಾತ್, ಶೆಟ್ಟಿಗಲ್ಲಿ ಜಮಾತ್, ವೀರಭದ್ರನಗರ ಬಿಲಾಲ್ ಮಸ್ಜಿದ್ ಜಮಾತ್ ಸೇರಿದಂತೆ ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಟಿಪ್ಪುಸುಲ್ತಾನ್ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಈ ಘಟನೆಗೆ ಕಾರಣವಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ ಅಮಾಯಕರಿಗೆ ನ್ಯಾಯ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.

ವೀರಭದ್ರನಗರದಲ್ಲಿ ಸೆ.23ರಂದು ತಡರಾತ್ರಿ ಎರಡು ಕೋಮುಗಳ ನಡುವೆ ಕಲ್ಲುತೂರಾಟ ನಡೆದಿದೆ. ಅಲ್ಲದೆ, ಕೆಲವು ಕಿಡಿಗೇಡಿಗಳು ಅಂದು ರಾತ್ರಿ 1.30ಕ್ಕೆ ಕಾಕರ್‌ಗಲ್ಲಿಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ. ದ್ವಿಚಕ್ರ ವಾಹನಗಳು, ಮನೆಯ ಬಾಗಿಲು, ಕಿಟಕಿಗಳ ಗಾಜುಗಳಿಗೆ ಹಾನಿ ಮಾಡಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನೆಯಲ್ಲಿ ಮಲಗಿದ್ದ ಅಮಾಯಕ ಯುವಕರನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ಕೆಲವು ಪೊಲೀಸರು ಶಾಮೀಲಾಗಿರುವುದು ಕಂಡು ಬಂದಿದೆ. ಮುಸ್ಲಿಮರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದ್ದು, ಜಿಲ್ಲಾಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಘ-ಸಂಸ್ಥೆಗಳು ಮನವಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News