ಮೈಸೂರಿನಲ್ಲಿ ಭಾರೀ ಮಳೆ: ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

Update: 2018-09-24 15:22 GMT

ಮೈಸೂರು,ಸೆ.24: ನಿನ್ನೆ ತಡರಾತ್ರಿ ಮೈಸೂರಿನಲ್ಲಿ ಭಾರೀ ಮಳೆ ಸುರಿದಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ನಗರದ ಕೆಲ ಭಾಗಗಳಲ್ಲಿ ಮಳೆ ಹಾನಿ ಸಂಭವಿಸಿದೆ. ಹಿನಕಲ್ ಕಲ್ಯಾಣಿ ಬಳಿ ರಸ್ತೆಯಲ್ಲಿ ಮಳೆ ನೀರು ತುಂಬಿದ್ದು, ವಾಹನ ಸವಾರರು ಸಂಚಾರ ಮಾಡಲು ಹರಸಾಹಸ ಪಡುವಂತಾಯಿತು. ನಗರದ ವಿದ್ಯಾರಣ್ಯಪುರಂನಲ್ಲಿಯೂ ಮಳೆ ಹಾನಿಯುಂಟಾಗಿದ್ದು, ಸರ್ಕಾರಿ ಗ್ರಂಥಾಲಯದ ಕಟ್ಟಡದ ಒಂದು ಭಾಗ ಕುಸಿದಿದೆ.

ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಹಿನಕಲ್ ನ ನನ್ನೇಶ್ವರ ಸ್ವಾಮಿ ದೇವಸ್ಥಾನ ಬಡಾವಣೆ ಮನೆಗಳಿಗೆ ನೀರು ನುಗ್ಗಿದ್ದು, ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಇದೇ ವೇಳೆ ಗ್ರಾಮ ಪಂಚಾಯತ್ ಸದಸ್ಯ ಹೊನ್ನಪ್ಪರನ್ನು ಸ್ಥಳೀಯ ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಚರಂಡಿ ವ್ಯವಸ್ಥೆ ಸರಿ ಇಲ್ಲದೆ ಮನೆಗಳಿಗೆ ನೀರು ನುಗ್ಗಿದೆ. ಚರಂಡಿ ವ್ಯವಸ್ಥೆ ಮಾಡಿಸದಿರುವುದಕ್ಕೆ ಈ ರೀತಿ ಅವಾಂತರ ಸೃಷ್ಟಿಯಾಗಿದೆ. ನಮ್ಮ ಸಮಸ್ಯೆಗಳನ್ನು ನಿಮ್ಮ ಬಳಿ ಹೇಳದೆ ಯಾರ ಬಳಿ ಹೇಳಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯನ ವಿರುದ್ಧ ಕಿಡಿಕಾರಿದ್ದಾರೆ. ಸಚಿವರ ಬಳಿಯೂ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News