ಸಹಕಾರ ಸಂಘದ ಚುನಾವಣೆ ವಿಚಾರ: ಆಡಳಿತಾಧಿಕಾರಿ ವಿರುದ್ಧ ಏಕೆ ಕಾನೂನು ಕ್ರಮ ಜರುಗಿಸಬಾರದು?: ಹೈಕೋರ್ಟ್

Update: 2018-09-24 16:53 GMT

ಬೆಂಗಳೂರು, ಸೆ.24: ಸಹಕಾರ ಸಂಘಗಳು ಇರುವುದು ಸದಸ್ಯರ ಮತ್ತು ಜನರ ಅನುಕೂಲಕ್ಕಾಗಿಯೇ ಹೊರತು ಅಧಿಕಾರಿಗಳಿಗಾಗಿ, ರಾಜಕಾರಣಿಗಳಿಗಾಗಿಯಲ್ಲ ಎಂದು ಸಹಕಾರ ಸಂಘದ ರಿಜಿಸ್ಟ್ರಾರ್ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ. 

ಹೊಸಕೋಟೆ ತಾಲೂಕಿನ ಕೊಳತೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ನಡೆಸುವಂತೆ ಕೋರಿ ಸಂಘದ ಮಾಜಿ ಅಧ್ಯಕ್ಷ ರಮೇಶ್ ಜಿ. ಮತ್ತಿತರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಹರೀಶ್ ಕುಮಾರ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ನ್ಯಾಯಾಲಯದ ಸೂಚನೆ ಮೀರಿ ಸಂಘದ ಕೆಲವೇ ಆಯ್ದ ಸದಸ್ಯರ ಸಾಮಾನ್ಯ ಸಭೆ ನಡೆಸಲು ಮುಂದಾಗಿದ್ದ ಸಂಘದ ಆಡಳಿತಾಧಿಕಾರಿ ವಿರುದ್ಧ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಹಾಗೆಯೇ ಆಡಳಿತಾಧಿಕಾರಿ ನಡವಳಿಕೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾದ ಸಹಕಾರ ಸಂಘಗಳ ರಿಜಿಸ್ಟ್ರಾರ್ ವಿರುದ್ಧವೂ ಕಿಡಿಕಾರಿತು. ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗುವ ಮತ್ತು ನಿಯಮ ಉಲ್ಲಂಘಿಸಿ ನಿಮಗೆ ಬೇಕಂದ ಹಾಗೆ ಆಡಳಿತ ನಡೆಸಲು ಇಚ್ಛಿಸುವ ನೀವು ಕಾನೂನಿಗಿಂತ ಮೇಲಿನವರು ಎಂದು ಭಾವಿಸಿದ್ದೀರಿ. ನಿಮ್ಮಂಥವರು ಹುದ್ದೆಯಲ್ಲಿ ಮುಂದುವರೆಯುವ ಅರ್ಹತೆ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ನಿಮ್ಮ ಮೇಲೆ ನ್ಯಾಯಾಲಯ ಕಾನೂನು ಕ್ರಮ ಕೈಗೊಳ್ಳಬಾರದೇಕೆ ಎಂಬುದಕ್ಕೆ ವಿವರಣೆ ನೀಡಿ ಎಂದು ಸೂಚಿಸಿ, ವಿಚಾರಣೆಯನ್ನು ಅ.28ಕ್ಕೆ ಮುಂದೂಡಿತು.

ಕೊಳತೂರು ಹಾಲು ಉತ್ಪಾದಕರ ಸಂಘಕ್ಕೆ ಅ.11ರಂದು ಚುನಾವಣೆ ನಡೆಯಬೇಕಿತ್ತು. ಆದರೆ, ಆ ಪ್ರಕಾರ ಆ.14ರಂದು ಚುನಾವಣಾ ದಿನಾಂಕವನ್ನೂ ಘೋಷಿಸಲಾಗಿತ್ತು. ಆದರೆ ಚುನಾವಣೆ ನಡೆಸುವ ಬದಲಿಗೆ ಸಹಕಾರ ಸಂಘದ ರಿಜಿಸ್ಟ್ರಾರ್ ಸಂಘವನ್ನು ಸೂಪರ್‌ಸೀಡ್ ಮಾಡಿ, ಆಡಳಿತಾಧಿಕಾರಿ ನೇಮಕ ಮಾಡಿದ್ದರು. ತದನಂತರ ಚುನಾವಣೆ ನಡೆಸುವಂತೆ ನಿರ್ದೇಶಿಸುವಂತೆ ಕೋರಿ ಸಂಘದ ರಮೇಶ್ ಮತ್ತಿತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದರೂ ಅಧಿಕಾರಿಗಳು ಗೈರಾಗಿದ್ದರು. ಜತೆಗೆ ಆಡಳಿತಾಧಿಕಾರಿ ಸಂಘದ ಸಾಮಾನ್ಯ ಸಭೆ ನಡೆಸಲು ತಮಗೆ ಬೇಕಾದ ಕೆಲವೇ ಆಯ್ದ ಸದಸ್ಯರನ್ನು ಬರುವಂತೆ ನೋಟಿಸ್ ಹೊರಡಿಸಿದ್ದರು.

ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ಸಭೆ ನಡೆಸಲು ಮುಂದಾಗಿದ್ದ ಅಧಿಕಾರಿಗಳ ಕ್ರಮ ನ್ಯಾಯಾಲಯದ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಘದ ಕಾರ್ಯದರ್ಶಿಯನ್ನು ಬಂಧಿಸಿ ಕರೆತರುವಂತೆ ಬೆಂ.ಗ್ರಾ. ಎಸ್ಪಿಗೆ ಆದೇಶಿಸಿ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News