ದಾವಣಗೆರೆ: ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ರವೀಂದ್ರನಾಥ್ ಆಕ್ಷೇಪ

Update: 2018-09-24 17:58 GMT

ದಾವಣಗೆರೆ, ಸೆ.24: ಶಿರಮಗೊಂಡನಹಳ್ಳಿ ರವೀಂದ್ರನಾಥ್ ಬಡಾವಣೆಯ ನಿವೇಶನ ಶೈಕ್ಷಣಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಪ್ರದೇಶವಾಗಿದ್ದು, ಅಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಂದಾಗಿರುವ ಪಾಲಿಕೆ ನಿರ್ಧಾರಕ್ಕೆ ಶಾಸಕ ಎಸ್.ಎ. ರವೀಂದ್ರನಾಥ್ ಅಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ. 

ಪಾಲಿಕೆ ಸಭಾಂಗಣದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಯುಕ್ತ ಮಂಜುನಾಥ್ ಬಳ್ಳಾರಿ ಮಾತನಾಡಿ, ಶಾಲೆಗಾಗಿ ಮೀಸಲಿರಿಸಿದ್ದ ಸ್ಥಳದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಈ ಹಿಂದಿನ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದಕ್ಕೆ ಶಾಸಕ ಎಸ್.ಎ.ರವೀಂದ್ರನಾಥ ಆಕ್ಷೇಪಣೆ ಸಲ್ಲಿಸಿರುವುದಾಗಿ ತಿಳಿಸಿದರು.

ಪಾಲಿಕೆ ಸದಸ್ಯ ಹಾಲೇಶ್ ಮಾತನಾಡಿ, ಈ ಮೊದಲ ಸಭೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ವಿಷಯ ಪ್ರಸ್ತಾಪಿಸಿದ್ದು ಯಾರು? ಅಲ್ಲದೆ, ಈಗಾಗಲೇ ಅಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಠರಾವು ಪಾಸ್ ಮಾಡಿದ ಮೇಲೂ ಆಕ್ಷೇಪಣೆ ಬಂದರೆ ಹೇಗೆ ಬದಲಿಸಲು ಸಾಧ್ಯ? ಹಾಗಾಗಿ, ದಲಿತರ, ಸರ್ವಜನರ ದನಿ ಅಂಬೇಡ್ಕರ್ ಭವನ ನಿರ್ಮಿಸಿ ಸಭಾ ತೀರ್ಮಾನವನ್ನೇ ಅಂತಿಮಗೊಳಿಸಬೇಕೆಂದ ಅವರು, ಈ ಕುರಿತು ವಿನಾಕಾರಣ ಚರ್ಚೆ ಬೇಡವೆಂದರು

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಎಸ್.ಎ.ರವೀಂದ್ರನಾಥ್, 2010ರಲ್ಲಿ ನಾರಾಯಣಸ್ವಾಮಿಯವರು ಅಲ್ಲಿ ಸರಕಾರಿ ಶಾಲೆಗಾಗಿ ಜಾಗ ಮೀಸಲಿರಿಸಿ ಗುದ್ದಲಿಪೂಜೆ ನೆರವೇರಿಸಿದ್ದಾರೆ. ಶಾಲೆಗಾಗಿ ಮೀಸಲಿಟ್ಟ ಸ್ಥಳವನ್ನು ಬೇರೆ ಉದ್ದೇಶಕ್ಕೆ ಬಳಸುವುದು ಬೇಡ ಎಂದ ಅವರು, ಬೇರೆ ಉದ್ದೇಶಕ್ಕೆ ಬಳಕೆ ಮಾಡುವ ಕುರಿತು ತನ್ನ ಅಕ್ಷೇಪಣೆ ಇದೆ ಎಂದು ಸರಕಾರಕ್ಕೆ ಪತ್ರ ಬರೆಯಿರಿ ಎಂದರು. ಇದಕ್ಕೆ ಮೇಯರ್ ಪ್ರತಿಕ್ರಿಯಿಸಿ, ಈ ಕುರಿತು ಶಾಸಕರ ಆಕ್ಷೇಪಣೆ ವರದಿ ದಾಖಲಿಸಿ, ಸರಕಾರಕ್ಕೆ ವರದಿ ನೀಡುತ್ತೇನೆಂದರು.

ನಂತರ, ಕಾಂಗ್ರೆಸ್‌ನ ಸದಸ್ಯ ಕೆ.ಜಿ.ಲಿಂಗರಾಜ ಮಾತನಾಡಿ, ಸಿದ್ದವೀರಪ್ಪಬಡಾವಣೆ 1ನೇ ಕ್ರಾಸ್‌ನಲ್ಲಿ ಪಾಲಿಕೆಯ ಬಹುವೌಲ್ಯದ ಜಾಗ ಕಬಳಿಸುವ ಹುನ್ನಾರವನ್ನು ಭೂ ಮಾಫಿಯಾ ನಡೆಸಿದೆ. ಆ ಜಾಗದಲ್ಲಿದ್ದ ಕಾಮಗಾರಿ ತೆರವು ಮಾಡಿ, ಜಾಗ ಮಾರಿಕೊಳ್ಳಲು ಹೊರಟಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ಸದಸ್ಯ ಎಂ. ಹಾಲೇಶ್ ಮಾತನಾಡಿ, ಪಿ.ಜೆ. ಬಡಾವಣೆಯಲ್ಲಿ 1 ಸೆಲ್ಲರ್‌ಗೆ ಬಿಲ್ಡಿಂಗ್ ಲೈಸೆನ್ಸ್ ಪಡೆದು, 4 ಅಂತಸ್ತು ಕಟ್ಟಲಾಗಿದೆ. ಈ ಬಗ್ಗೆ ನೀಡಿದ್ದರೂ ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿತ್ತು. ಆಯುಕ್ತರು ಕಟ್ಟಡ ಕೆಡವಲು ಆದೇಶ ನೀಡಿದ್ದರೂ ಅಧಿಕಾರಿಗಳು ಅದನ್ನು ಕೆಡವಿಲ್ಲ ಏಕೆ? ಅಧಿಕಾರಿಗಳೂ ಶಾಮೀಲಾಗಿದ್ದಾರಾ? ಬಡವರು ಸಣ್ಣ ಮನೆ ಕಟ್ಟಿಕೊಂಡರೂ ಕೆಡವಿಸುವ ಅಧಿಕಾರಿಗಳು ಈ ಪ್ರಕರಣದಲ್ಲಿ ಯಾಕೆ ವೌನವಾಗಿದ್ದೀರಿ? ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯ ಡಿ.ಕೆ.ಕುಮಾರ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಮಳಿಗೆ ಕಟ್ಟಿದ್ದರೂ ಅದರಿಂದ ಆದಾಯ ಬರುತ್ತಿಲ್ಲ. ಕಟ್ಟಿ ವರ್ಷಗಳೇ ಕಳೆದರೂ ಪಾಲಿಕೆ ಆದಾಯ ತಪ್ಪುತ್ತಿದೆಯೇ ಹೊರತು, ಅವನ್ನು ಹರಾಜು ಹಾಕುವ ಕೆಲಸವಾಗುತ್ತಿಲ್ಲ. ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ಕಲ್ಪಿಸಲು ವರ್ಷಗಟ್ಟಲೇ ಬೇಕೆ? ಚರ್ಚ್ ರಸ್ತೆಯ ಸೂಪರ್ ಮಾರ್ಕೆಟ್‌ನಿಂದ ಏನು ಆದಾಯ ಬರುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಆಯುಕ್ತ ಮಂಜುನಾಥ ಬಳ್ಳಾರಿ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ 994 ಮಳಿಗೆ ಇದ್ದು, 908 ಹರಾಜು ಮಾಡಲಾಗಿದೆ. ಇನ್ನೂ 86 ಮಳಿಗೆ ಹರಾಜು ಪ್ರಕ್ರಿಯೆ ಶೀಘ್ರವೇ ಕೈಗೊಳ್ಳಲಾಗುವುದು. ನೀರು, ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಸಾಗಿದೆ. ಆದಷ್ಟು ಬೇಗನೇ ರಾಜು ಕರೆಯಲಾಗುವುದು ಎಂದರು. 
ಸದಸ್ಯ ದಿನೇಶ್.ಕೆ.ಶೆಟ್ಟಿ ಮಾತನಾಡಿ, ನಗರದಲ್ಲಿ ಕಸ ವಿಲೇವಾರಿಗಾಗಿ ಅಪೆ ಆಟೊಗಳು ಬಂದಿರುವುದರಿಂದ ಶೇ.70ರಷ್ಟು ಕಸ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಸದಸ್ಯರಾದ ಉಮೇಶ್ ಹಾಗೂ ಹಾಲೇಶ್, ಪಾಲಿಕೆಯಲ್ಲಿ ಕೆಲಸ ಮಾಡದ ಅಧಿಕಾರಿಗಳನ್ನು ವರ್ಗಾವಣೆ ಮಾಡಿರಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮಂಜುನಾಥ್ ಬಳ್ಳಾರಿ, ಕರ್ತವ್ಯಲೋಪವೆಸಗಿದ ಅಧಿಕಾರಿ ಮೇಲೆ ಕ್ರಮಕೈಗೊಳ್ಳಲಾಗುತ್ತಿದೆ. ಯಾರೇ ಗೈರು ಹಾಜರಾದರೆ ಅವರ ಮೇಲೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ಉಪ ಮೇಯರ್ ಕೆ. ಚಮನ್ ಸಾಬ್, ಆಡಳಿತ ಪಕ್ಷ, ವಿಪಕ್ಷದ ಸದಸ್ಯರು, ಪಾಲಿಕೆ ಅಧಿಕಾರಿಗಳು ಸಭೆಯಲ್ಲಿದ್ದರು.

‘ಇಂದಿರಾ ಕ್ಯಾಂಟೀನ್ ವಿಷಯದಲ್ಲಿ ರಾಜಕೀಯ ಬೇಡ’

ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೇಡ. ಕ್ಯಾಂಟೀನ್ ವ್ಯವಸ್ಥೆ ಸರಿ ಇಲ್ಲವೆಂಬುದಾಗಿ ಮಿಥ್ಯಾರೋಪ ಮಾಡದಂತೆ ದಿನೇಶ ಕೆ.ಶೆಟ್ಟಿ ಮನವಿ ಮಾಡಿದರು. ಇದಕ್ಕೂ ಮೊದಲು ಇಂದಿರಾ ಕ್ಯಾಂಟೀನ್ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಕುಮಾರ್, ದಾವಣಗೆರೆ ನಗರದಲ್ಲಿ 8 ಇಂದಿರಾ ಕ್ಯಾಂಟೀನ್ ಇದ್ದು, ರಜೆ ಇದ್ದಾಗಲೂ ಬಿಲ್ ಏಕೆ ಕೊಡುತ್ತೀರಿ? ಕ್ಯಾಂಟೀನ್ ತಿಂಡಿ, ಆಹಾರ ರುಚಿಯೂ ಇರುವುದಿಲ್ಲ. ರಾತ್ರಿ ವೇಳೆ ಊಟ ಮಾಡುವವರೂ ಕ್ಯಾಂಟೀನ್‌ನಲ್ಲಿ ಕಡಿಮೆ. ವಾಸ್ತವ ಹೀಗಿದ್ದರೂ ಕ್ಯಾಂಟೀನ್‌ಗೆ ಲಕ್ಷಾಂತರ ಹಣ ಕಟ್ಟಲಾಗುತ್ತಿದೆ ಎಂದರು.

ಆಯುಕ್ತ ಮಂಜುನಾಥ ಬಳ್ಳಾರಿ ಮಾತನಾಡಿ, ನಗರದಲ್ಲಿ ಒಟ್ಟು 8 ಕ್ಯಾಂಟೀನ್ ಇವೆ. ನಿತ್ಯ 700-800 ಜನ ಅದರ ಸೇವೆ ಬಳಸುತ್ತಿದ್ದಾರೆ. ಎಪಿಎಂಸಿ, ಮಂಡಕ್ಕಿ ಭಟ್ಟಿ ಕ್ಯಾಂಟೀನ್‌ನಲ್ಲಿ 300 ಊಟ, ತಿಂಡಿ ಹೋಗುತ್ತಿದ್ದು, ಜೂನ್-ಜುಲೈ ತಿಂಗಳ ಬಿಲ್ ನೀಡುವ ಬಗ್ಗೆ ಸಭೆಯಲ್ಲಿ ಮಂಡಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News