ಭದ್ರಾ ಜಲಾಶಯ ಪ್ರವಾಸಿ ತಾಣವಾಗಿ ಪರಿವರ್ತಿಸಲು 13 ಕೋ.ರೂ. ಮಂಜೂರು: ಸಚಿವ ಸಾ.ರಾ.ಮಹೇಶ್

Update: 2018-09-24 18:03 GMT

ಶಿವಮೊಗ್ಗ, ಸೆ.24: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಅವಳಿ ಜಿಲ್ಲೆಗಳ ಗಡಿ ಪ್ರದೇಶದಲ್ಲಿರುವ ಭದ್ರಾ ಜಲಾಶಯದ ಸುತ್ತಮುತ್ತಲ ಪ್ರದೇಶವನ್ನು ಬಹು ಆಕರ್ಷಿತ ಪ್ರವಾಸಿ ತಾಣವಾಗಿ ಮಾರ್ಪಡಿಸಲು ಸರಕಾರ ಈಗಾಗಲೇ 13 ಕೋಟಿ ರೂ. ಮಂಜೂರು ಮಾಡಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

ಸೋಮವಾರ ಭದ್ರಾ ಜಲಾಶಯ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧ್ದಿಪಡಿಸಬಹುದಾದ ಪ್ರದೇಶಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಇಂಜಿನಿಯರ್‌ರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇಲ್ಲಿರುವ 182 ಎಕರೆ ಪ್ರದೇಶದಲ್ಲಿ 105 ಎಕರೆ ಭೂಮಿಯನ್ನು ಅಭಿವೃದ್ಧ್ದಿಪಡಿಸಲು ಕಾಯ್ದಿರಿಸಲಾಗಿದ್ದು, ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಅಂದಾಜು 100 ಕೋ.ರೂ.ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆಯನ್ನು ತಯಾರಿಸಿ ಸರಕಾರಕ್ಕೆ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೆ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಅತ್ಯಲ್ಪ ಅವಧಿಯಲ್ಲಿ ಅಂದರೆ 8-10 ತಿಂಗಳೊಳಗಾಗಿ ಕೈಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದ ಅವರು, ರಾಜ್ಯದ ಮುಖ್ಯಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಪ್ರವಾಸಿ ಕ್ಷೇತ್ರಗಳ ಅಭಿವೃದ್ಧ್ದಿಗೆ ಸರಕಾರದಿಂದ ಅಗತ್ಯ ನೆರವನ್ನು ನೀಡಲಾಗುವುದು ಎಂದರು.

ಇತ್ತೀಚೆಗೆ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಸುಮಾರು 4,000 ಕೋಟಿ ರೂ. ಆರ್ಥಿಕ ನಷ್ಟ ಸಂಭವಿಸಿರುವ ಬಗ್ಗೆ ಮಾಹಿತಿ ಇದೆ. ಈ ಪ್ರದೇಶದ ಸಂತ್ರಸ್ಥರ ನೆರವಿಗೆ ಅಗತ್ಯವಿರುವ ಎಲ್ಲಾ ರೀತಿಯ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ. ಆದರೂ ಕೇಂದ್ರ ಸರಕಾರ ಕೂಡ ರಾಷ್ಟ್ರೀಯ ವಿಪತ್ತು ನೀತಿ-ನಿಯಮಗಳನ್ನು ಸಡಿಲಿಸಿ, ವಿಶೇಷ ಪ್ರಕರಣ ವೆಂದು ಭಾವಿಸಿ ಹೆಚ್ಚಿನ ಪರಿಹಾರ ನೀಡಿ ಕೊಡಗಿನ ಪುನರ್‌ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡುವಂತೆ ಪ್ರಧಾನ ಮಂತ್ರಿಯವರಿಗೆ ಮನವಿ ಮಾಡಲಾಗಿದೆ ಎಂದರು.

ಈ ಸಂದರ್ಭ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ಮಂಜುನಾಥಗೌಡ, ಜಿಪಂ ಸದಸ್ಯ ಯೋಗೀಶ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಹನುಮಾನಾಯ್ಕ, ರೇಷ್ಮೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ನೆರವಾಗಲು ರಾಜ್ಯದ ಅನೇಕ ಜನ ದಾನಿಗಳು ಸುಮಾರು 65 ಕೋಟಿ ರೂ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮಾ ಮಾಡಿ ಸಹಾಯಹಸ್ತ ಚಾಚಿದ್ದಾರೆ. ಅಲ್ಲಿ ನೆಲೆ ಕಳೆದುಕೊಂಡು ನಿರಾಶ್ರಿತರಾಗಿರುವ ಪ್ರತಿ ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ರೂ. 6 ಲಕ್ಷವನ್ನು ನೀಡಲಾಗುತ್ತಿದೆ. ಅಲ್ಲದೆ ಪ್ರತಿ ಕುಟುಂಬಕ್ಕೆ 1.09 ಲಕ್ಷ ರೂ. ದಿನಬಳಕೆಯ ಸಾಮಗ್ರಿಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಸಂತ್ರಸ್ತ ಬಹುತೇಕ ಕುಟುಂಬಗಳಿಗೆ ತಕ್ಷಣದ ನೆರವನ್ನು ನೀಡಲಾಗಿದೆ. ವಾಸದ ಮನೆಯನ್ನು ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ಸ್ವಂತ ಸೂರೊಂದನ್ನು ನಿರ್ಮಿಸಿಕೊಳ್ಳಲು 100 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ.
-ಸಾ.ರಾ.ಮಹೇಶ್, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News