ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆದಾಗ ರಾಷ್ಟ್ರದ ಅಭಿವೃದ್ದಿ ಸಾಧ್ಯ: ಸಚಿವ ಜಿ.ಟಿ.ದೇವೇಗೌಡ

Update: 2018-09-24 18:21 GMT

ಮೈಸೂರು,ಸೆ.24: ಹೆಣ್ಣು ಮಕ್ಕಳು ಕೂಡ ಹೆಚ್ಚಿನ ವಿದ್ಯಾಭ್ಯಾಸ ಪಡೆದಾಗ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸೋಮವಾರ 2018-19ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ನೆಸ್ಸೆಸ್, ಎನ್ಸಿಸಿ ಮತ್ತು ಗೈಡ್ಸ್ ಹಾಗೂ ರೆಡ್ ಕ್ರಾಸ್ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ, ವಾರ್ಷಿಕ ಸಂಚಿಕೆ ಸೃಷ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ನಾನು ಇಲ್ಲಿಂದಲೇ ಶಾಸಕನಾಗಿದ್ದು, ಉನ್ನತ ಶಿಕ್ಷಣ ಸಚಿವನಾಗಿದ್ದು ಎಂದರು. ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು. ಮಹಿಳೆ ಅಂದರೆ ಮೊದಲೆಲ್ಲ ಕಟ್ಟುಪಾಡುಗಳಿತ್ತು. ಆಕೆ ನಾಲ್ಕುಗೋಡೆಗಳ ಮಧ್ಯೆಯೇ ಇರಬೇಕಾಗಿತ್ತು. ಪ್ರಾಥಮಿಕ ಶಾಲೆಗೇ ಆಕೆಯ ಶಿಕ್ಷಣ ಸೀಮಿತವಾಗುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಸಮಾನತೆ ಬಂದಿದೆ. ಮಹಾತ್ಮಾ ಗಾಂಧೀಜಿ ಸೇರಿದಂತೆ ಹಲವು ಮಹನೀಯರ ಕನಸು ನನಸಾಗುತ್ತಿದೆ. ಪ್ರತಿಯೊಂದು ಮನೆಯಲ್ಲಿಯೂ ಹೆಣ್ಣು ಮಗಳೊಬ್ಬಳು ಕಲಿತರೆ ಇಡೀ ಗ್ರಾಮವೇ ಅಕ್ಷರಸ್ಥರಾದಂತೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಹೆಚ್.ವೈ.ಶ್ರೀಶಕುಮಾರ್, ನಿವೃತ್ತ ಪ್ರಾಂಶುಪಾಲ ಪ್ರೊ.ಹೆಚ್.ಬಿ.ಮಲ್ಲಿಕಾರ್ಜುನ ಪಾಲ್ಗೊಂಡಿದ್ದರು. ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಮೈಸೂರು ಕೃಷ್ಣಮೂರ್ತಿ ಪ್ರಧಾನ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಸತೀಶ್ ಬಾಬು ಬಿ.ಕೆ.ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯೆ ಚಂದ್ರಿಕಾ ಸುರೇಶ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News