ನೈತಿಕವಾಗಿ, ಕಾನೂನಾತ್ಮಕವಾಗಿ ಮಠದಲ್ಲಿ ಯಾವ ಲೋಪವೂ ಇಲ್ಲ: ರಾಘವೇಶ್ವರ ಶ್ರೀ

Update: 2018-09-25 16:19 GMT

ಬೆಂಗಳೂರು, ಸೆ.25: ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಮಠದಲ್ಲಿ ಯಾವ ಲೋಪವೂ ಇಲ್ಲ. ಆದರೆ ಮಠಮಾನ್ಯಗಳಿಗೆ ರಕ್ಷಣೆ ಕೊಡಬೇಕಾದವರು ಅದರ ಭಕ್ಷಣೆಗೆ ಮುಂದಾಗಿದ್ದಾರೆ ಎಂದು ಹೊಸನಗರ ರಾಮಚಂದ್ರಾಪುಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.

ಗಿರಿನಗರದ ಶಾಖಾಮಠದಲ್ಲಿ ಮಂಗಳವಾರ ತಮ್ಮ 25ನೆ ಚಾತುರ್ಮಾಸ್ಯ ವ್ರತ ಸಮಾಪ್ತಿಯ ಸೀಮೋಲ್ಲಂಘನದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಮಠದ ಶತ್ರುಗಳು ನಮ್ಮ ಚಾತುರ್ಮಾಸ್ಯ ವ್ರತಕ್ಕೆ ಭಂಗ ತರುವ ಯತ್ನವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಶಂಕರಾಚಾರ್ಯರು ಸ್ಥಾಪಿಸಿದ ಈ ದಿವ್ಯ ಸಂಸ್ಥೆಯನ್ನು ಒಡೆಯಲು ನಮ್ಮ ವಿರೋಧಿಗಳು ತಮ್ಮೆಲ್ಲಾ ಶಕ್ತಿ, ಹಣ ಮತ್ತು ಶ್ರಮವನ್ನು ಬಳಸುತ್ತಿದ್ದಾರೆ. ಅವರೆಲ್ಲಾ ಇದನ್ನು ಉತ್ತಮ ಕಾರ್ಯಗಳಿಗೆ ಬಳಸಿದ್ದರೆ ಜಗತ್ತಿಗೆ ಒಳಿತಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ಆತ್ಮಶುದ್ಧಿ ಇರುವುದರಿಂದ ನಮಗೆ ಯಾವುದರ ಭಯವೂ ಇಲ್ಲ. ನಾವು ರಾಮ ಸ್ಮರಣೆಯಲ್ಲಿದ್ದರೆ, ಶತ್ರುಗಳು ನಮ್ಮ ಸ್ಮರಣೆಯಲ್ಲಿ ಇರುತ್ತಾರೆ. ವ್ರತದ ಭಂಗಕ್ಕೆ ಹೆಚ್ಚು ಪ್ರಯತ್ನ ನಡೆಯುತ್ತಿದೆ ಎಂದರು.

ನಮ್ಮ ವ್ರತಭಂಗಕ್ಕೆ ವಿರೋಧಿಗಳು ಎಷ್ಟೇ ಪ್ರಯತ್ನಪಟ್ಟರೂ ರಾಮಚಂದ್ರಾಪುರ ಮಠವನ್ನು ಯಾರೂ ಏನೂ ಮಾಡಲು ಆಗದು. ಸಮಾಜದ ಪರಿವರ್ತನೆಯಲ್ಲಿ ತೊಡಗಿಕೊಂಡವರು ವಿಷಕಂಠರಾಗಿ ಎಲ್ಲವನ್ನೂ ಎದುರಿಸಲು ಸಿದ್ಧರಾಗಿ ಇರಬೇಕಾಗುತ್ತದೆ ಎಂದು ಅವರು ಹೇಳಿದರು.

ಪ್ರಶಸ್ತಿ ಪ್ರದಾನ: ಶಿಕ್ಷಣ ತಜ್ಞೆ ಶಾರದಾ ಜಯಗೋವಿಂದ ಅವರಿಗೆ ಇದೇ ವೇಳೆ ’ಚಾತುರ್ಮಾಸ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News