ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ: ಸಿದ್ದರಾಮಯ್ಯ

Update: 2018-09-25 17:05 GMT

ಬೆಂಗಳೂರು, ಸೆ.25: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯೇತರ ಸರಕಾರ ಅಧಿಕಾರಕ್ಕೆ ಬರುವುದು ಶೇ.100ಕ್ಕೆ 100ರಷ್ಟು ನಿಶ್ಚಿತ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಆಗೇ ಆಗುತ್ತಾರೆ. ಆದುದರಿಂದ, ಪ್ರತಿಯೊಬ್ಬ ಶಾಸಕರು, ಸಂಸದರು ತಮ್ಮ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಸದೃಢವಾಗಿ ಸಂಘಟಿಸಬೇಕಿದೆ. ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಹೇಳಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿಯನ್ನು ಹೈಕಮಾಂಡ್ ತನಗೆ ವಹಿಸಿದ್ದು, ಯಾವುದೇ ಕಾರಣಕ್ಕೂ ಸರಕಾರ ಅಸ್ಥಿರಗೊಳಿಸಲು ಅವಕಾಶ ಮಾಡಿಕೊಡುವುದಿಲ್ಲ. ಇದಕ್ಕಾಗಿ, ಶಾಸಕರ ಸಹಕಾರ ಅಗತ್ಯ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಹೈಕಮಾಂಡ್ ಯಾರಿಗೆ ಅವಕಾಶ ನೀಡುತ್ತದೆಯೋ ಅವರು ಸಚಿವರಾಗುತ್ತಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರತಿ ಆರು ತಿಂಗಳಿಗೊಮ್ಮೆ ಸಚಿವರ ಕಾರ್ಯವೈಖರಿಯ ಮೌಲ್ಯಮಾಪನ ಮಾಡುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಸರಕಾರದಲ್ಲಿ ಕೆಲಸ ಮಾಡದ ಸಚಿವರನ್ನು ಬಹಳ ದಿನ ಮುಂದುವರೆಸುವುದಿಲ್ಲ. ನಿಮ್ಮ ಕಿತ್ತಾಟ ಬೇರೆಯವರಿಗೆ ಅನುಕೂಲವಾಗುವುದು ಬೇಡ. ಬಿಜೆಪಿಯವರು ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ನೀವು ಆಮಿಷಗಳಿಗೆ ಬಲಿಯಾಗಬೇಡಿ, ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ ಕೈಗೊಳ್ಳಬೇಡಿ ಎಂದು ಅತೃಪ್ತ ಶಾಸಕರಿಗೆ ಅವರು ಕಿವಿಮಾತು ಹೇಳಿದ್ದಾರೆ.

ಒಂದು ವೇಳೆ ನೀವು ಪಕ್ಷ ಬಿಟ್ಟು ಹೋದರೆ ಏನಾಗಬಹುದು ಎಂಬುದನ್ನು ಊಹಿಸಿಕೊಂಡಿದ್ದೀರಾ? ಈ ಹಿಂದೆ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿರುವವರ ಮುಖಂಡರು, ನಾಯಕರು ಇಂದು ಯಾವ ಪರಿಸ್ಥಿತಿಯಲ್ಲಿದ್ದಾರೆ. ಬಿಜೆಪಿಯವರು ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂಬುದನ್ನು ನೋಡಿ ಅರ್ಥ ಮಾಡಿಕೊಳ್ಳಿ. ಪಕ್ಷವು ಸೂಕ್ತ ಸಂದರ್ಭದಲ್ಲಿ ನಿಮ್ಮನ್ನು ಗುರುತಿಸಿ ಜವಾಬ್ದಾರಿಗಳನ್ನು ನೀಡುತ್ತದೆ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಪಕ್ಷ ಸಂಘಟನೆ ಅಸಾಧ್ಯ: ಸಮ್ಮಿಶ್ರ ಸರಕಾರದಲ್ಲಿ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೇ ಬಿಡುಗಡೆಯಾಗುತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿ, ಪಕ್ಷ ಸಂಘಟಿಸಿ, ಕಾರ್ಯಕರ್ತರ ಪಡೆ ಕಟ್ಟಿ ಎಂದರೆ ನಾವು ಏನು ಮಾಡಲು ಸಾಧ್ಯ ಎಂದು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ವಿರುದ್ಧ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಕೆಲವು ಸೀಮಿತ ಕ್ಷೇತ್ರಗಳಿಗೆ ಮಾತ್ರ ಯಾವ ಅಡೆ ತಡೆ ಇಲ್ಲದೆಯೇ ಅನುದಾನ ಬಿಡುಗಡೆಯಾಗುತ್ತದೆ. ಅಗತ್ಯ ಯೋಜನೆಗಳು, ಕಾರ್ಯಕ್ರಮಗಳಿಗೆ ಮಂಜೂರಾತಿ ಸಿಗುತ್ತದೆ. ಆದರೆ, ನಮ್ಮ ಕ್ಷೇತ್ರಗಳ ಪಾಡೇನು. ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಯಾವ ಕೆಲಸಗಳು ಆಗುತ್ತಿಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

ನಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದರೆ, ಅದಕ್ಕೆ ಬಂಡಾಯ ಎಂದು ಕರೆಯಲಾಗುತ್ತಿದೆ. ಸುಮ್ಮನೆ ಕೂತರೆ ಯಾವ ಕೆಲಸಗಳು ಆಗುವುದಿಲ್ಲ. ಕ್ಷೇತ್ರದ ಜನತೆಗೆ ಉತ್ತರ ಹೇಳಲು ಸಾಧ್ಯವಾಗುತ್ತಿಲ್ಲ. ಸಮ್ಮಿಶ್ರ ಸರಕಾರದಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ನಮ್ಮ ಕೆಲಸಗಳಿಗೆ ಕೈ ಚಾಚಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳ ವರ್ಗಾವಣೆಯೂ ಏಕ ಪಕ್ಷೀಯವಾಗಿ ತೀರ್ಮಾನವಾಗುತ್ತಿದೆ. ನಾವು ಕೇಳುವ ಅಧಿಕಾರಿಗಳನ್ನು ನಮ್ಮ ಕ್ಷೇತ್ರಗಳಿಗೆ ಹಾಕುತ್ತಿಲ್ಲ. ನಿಮ್ಮನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡರೂ ಪರಿಹಾರ ಸಿಗುತ್ತಿಲ್ಲ. ಸರಕಾರದಲ್ಲಿರುವವರು ನಮ್ಮ ಮನವಿಗೆ ಕಿವಿಗೊಡುತ್ತಿಲ್ಲ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸಚಿವರ ವಿರುದ್ಧವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ನಿಗಮ, ಮಂಡಳಿಗಳಿಗೆ ನೇಮಕಾತಿ, ಸಚಿವ ಸಂಪುಟ ವಿಸ್ತರಣೆ ಮಾಡಲು ಕುಂಟು ನೆಪಗಳನ್ನು ಹೇಳಿಕೊಂಡು ಕಾಲಹರಣ ಮಾಡಲಾಗುತ್ತಿದೆ. ಹೈಕಮಾಂಡ್ ಬಳಿ ಚರ್ಚೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾವುದಕ್ಕೂ ತಮ್ಮ ಕಡೆ ಬೊಟ್ಟು ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯಗೆ ಶಾಸಕರು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ.

ಮುಖ್ಯಮಂತ್ರಿಗೆ ಹೇಳಿದರೆ ನಮಗೆ ಸಹಾಯ ಮಾಡುತ್ತಾರೆ ಅಂತಾರೆ. ಆದರೆ, ಅವರು ನಮ್ಮ ಬಗ್ಗೆ ಗಮನವೇ ಹರಿಸುವುದಿಲ್ಲ. ಆದರೆ, ರಾಮನಗರ ಕ್ಷೇತ್ರಕ್ಕೆ ಮಾತ್ರ ಎಲ್ಲ ಅನುಮತಿಗಳು ಸಿಗುತ್ತವೆ. ಮುಖ್ಯಮಂತ್ರಿ ನಮ್ಮ ಬಗ್ಗೆ ತಾರತಮ್ಯ ಮಾಡುತ್ತಿರುವುದೇಕೆ? ಎಂದು ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೊನ್ನೆ ಗಣೇಶ ಮಹೋತ್ಸವ ವೇಳೆ ಗಲಾಟೆ ನಡೆಯಿತು. ಮುಖ್ಯಮಂತ್ರಿ ನೇರವಾಗಿ ಡಿಜಿ ಹಾಗೂ ಎಸ್ಪಿಯನ್ನು ಸಂಪರ್ಕಿಸಿ ಮಾತನಾಡಿದ್ದಾರೆ. ಅವರ ಕಡೆಯವರರಿಗೆ ಮಾತ್ರ ಸಹಾಯ ಮಾಡಿದ್ದಾರೆ. ಹೀಗಾದರೆ ನಾವೇನು ಮಾಡಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ಸಚಿವರು, ಸಂಸದರು, ರಾಜ್ಯಸಭಾ ಸದಸ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News