ತೀರ್ಥಹಳ್ಳಿ: ಏಳು ಜನರಲ್ಲಿ ಎಚ್1ಎನ್1 ದೃಢ; ಜಾಗೃತ ದಳ ನಿಯೋಜನೆ

Update: 2018-09-25 17:29 GMT

ಶಿವಮೊಗ್ಗ, ಸೆ. 25: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಶಂಕಿತ ಎಚ್1ಎನ್1 ಜ್ವರ ಕಾಣಿಸಿಕೊಂಡಿದೆ. ಏಳು ಜನರು ಎಚ್1ಎನ್1 ಸೋಂಕಿಗೆ ತುತ್ತಾಗಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಮಂಗಳವಾರ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ. ಬಿ. ಸಿ. ವೆಂಕಟೇಶ್ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಈ ವಿಷಯ ಖಚಿತಪಡಿಸಿದ್ದಾರೆ. ‘ಜ್ವರ ಪೀಡಿತರ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗೆಂದು ಶಿವಮೊಗ್ಗದ ವೈರಾಲಜಿ ಇನ್‌ಸ್ಟಿಟ್ಯೂಟ್‌ಗೆ ಕಳುಹಿಸಲಾಗಿತ್ತು. ಇದರಲ್ಲಿ 7 ಜನರು ಎಚ್1ಎನ್1 ನಿಂದ ಬಳಲುತ್ತಿರುವುದು ಕಂಡುಬಂದಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

ತೀರ್ಥಹಳ್ಳಿ ಪಟ್ಟಣದಲ್ಲಿರುವ ಸರಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ರೋಗ ಪೀಡಿತರಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಚೇತರಿಸಿಕೊಂಡಿದ್ದಾರೆ. ಹಾಗೆಯೇ ಪ್ರತ್ಯೇಕ ವಾರ್ಡ್‌ನ್ನು ಕೂಡ ತೆರೆಯಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವವರಿಗೂ ಉಚಿತವಾಗಿ ಮಾತ್ರೆ ವಿರಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ, ಶಿರಾಜಪುರ, ಮಹಿಷಿ, ಹಾರೋಗೊಪ್ಪಗ್ರಾಮಗಳಲ್ಲಿ ಶಂಕಿತ ಎಚ್1ಎನ್1 ಪ್ರಕರಣಗಳು ಕಂಡುಬಂದಿವೆ. ಈ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯಿಂದ ಜಾಗೃತ ದಳ ನಿಯೋಜಿಸಲಾಗಿದೆ. ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಎಚ್1ಎನ್1 ರೋಗ ಹರಡಲು ಕಾರಣವಾಗುವ ಅಂಶಗಳ ಕುರಿತಂತೆಯೂ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಚ್ಛತೆ, ಸೊಳ್ಳೆ ನಿರ್ಮೂಲನೆಯ ಬಗ್ಗೆಯೂ ತಿಳಿ ಹೇಳಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾಗರಿಕರು ಆತಂಕ ಪುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.

ತತ್ತರ: ಪ್ರಸ್ತುತ ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲ ಧಗೆ ಹೆಚ್ಚಾಗುತ್ತಿದೆ. ಈ ನಡುವೆ ಸಾಂಕ್ರಾಮಿಕ ರೋಗಗಳ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ನಾಗರಿಕರು ಜ್ವರ ಬಾಧೆಯಿಂದ ಬಳಲುತ್ತಿದ್ದಾರೆ.

ಆಸ್ಪತ್ರೆಗೆ ಜಿಪಂ ಸದಸ್ಯ ಭೇಟಿ

ತೀರ್ಥಹಳ್ಳಿ ತಾಲೂಕಿನ ಜಿಲ್ಲಾ ಪಂಚಾಯತ್ ಸದಸ್ಯ ಕಾಸರವಳ್ಳಿ ಶ್ರೀನಿವಾಸ್ ತೀರ್ಥಹಳ್ಳಿಯ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿಯಿತ್ತು ಜ್ವರ ಪೀಡಿತರ ಆರೋಗ್ಯ ವಿಚಾರಿಸಿದರು. ಹಾಗೆಯೇ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯ ಜೊತೆ ಸಮಾಲೋಚಿಸಿದರು. ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಔಷಧೋಪಚಾರ ನೀಡುವಂತೆ ಸೂಚಿಸಿದರು.

‘ಯಾವುದೇ ಸಾವು ಸಂಭವಿಸಿಲ್ಲ’
ಮಣಿಪಾಲ್ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಮೃತಪಟ್ಟ ಹೊದಲ ಅರಳಾಪುರ ಗ್ರಾಮದ ನಿವಾಸಿಯ ಸಾವಿಗೆ ಎಚ್1ಎನ್1 ಕಾರಣವಲ್ಲ. ಆಸ್ಪತ್ರೆಯ ವೈದ್ಯಕೀಯ ವರದಿಯಲ್ಲಿ ಎಚ್1ಎನ್1 ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಈ ಕುರಿತಂತೆ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಸಿ.ವೆಂಕಟೇಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News