ಮೈಸೂರು: ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಕಾಲ್ನಡಿಗೆ ಜಾಥಾ; ಪ್ರೊ.ಕೆ.ಎಸ್.ಭಗವಾನ್ ಚಾಲನೆ

Update: 2018-09-25 18:12 GMT

ಮೈಸೂರು,ಸೆ.25: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗಾಗಿ ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಮೈಸೂರಿನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಜಾಥಕ್ಕೆ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಚಾಲನೆ ನೀಡಿದರು.

ನಗರದ ಪುರಭವನದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಮಂಗಳವಾರ ಜಮಾಯಿಸಿದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಮಾದಿಗ ಪ್ರತಿಭಟನಾಕಾರರು, ನಮ್ಮ ನ್ಯಾಯಯುತ ಬೇಡಿಕೆಗೆ ಪಕ್ಷಾತೀತವಾಗಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಸರ್ಕಾರದ ಮೇಲೆ ಒತ್ತಡ ಹೇರಲು ಧ್ವನಿಯಾಗಬೇಕು. ನ್ಯಾ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಂಬಂಧ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ಇದೇ ವೇಳೆ ಮಾತನಾಡಿದ ಪ್ರೊ.ಕೆ.ಎಸ್.ಭಗವಾನ್, ಕುವೆಂಪು ಅವರ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಕಲ್ಪಿಸುವುದು ಸಂವಿಧಾನದ ಆಶಯಕ್ಕೆ ಗೌರವ ತರುವಂತಹದು. ಹಸಿದವರಿಗೆ ಅನ್ನ ನೀಡುವುದು ಸರಕಾರಗಳ ಕರ್ತವ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು, ಅಸ್ಪೃಷ್ಯರ ಏಳಿಗೆಗೆ ಸ್ಪಂಧಿಸಬೇಕಾದ ಸರಕಾರಗಳು ವಿಳಂಬ ಧೋರಣೆ ತಾಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಸಂವಿಧಾನ ಬದ್ದವಾಗಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೂಡಲೇ ಸರಕಾರ ಜಾರಿಮಾಡಬೇಕು. ನೊಂದವರ ಶಾಂತಿಯುತ ಹೋರಾಟಕ್ಕೆ ಜಯಸಿಗಲಿ ಎಂದು ಆಶಿಸಿದರು.

ಸಾಮಾಜಿಕ ಹೋರಾಟಗಾರ ಡಾ.ಆನಂದ್ ಮಾತನಾಡಿ, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯ ಹೋರಾಟದ ಜೊತೆಗೆ, ಮಾದಿಗ ರಾಜಕಾರಣಿಗಳ ವೈಫಲ್ಯಗಳ ವಿರುದ್ಧವಾಗಿದೆ ಈ ಹೋರಾಟ. ಅವರ ಕರ್ತವ್ಯ ಲೋಪದಿಂದ ಸದಾಶಿವ ಆಯೋಗ ವರದಿ ಜಾರಿಗೆ ರಾಜ್ಯ ಸರಕಾರಗಳು ಹಿಂದೇಟು ಹಾಕುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಲ್ನಡಿಗೆ ಜಾಥಾದಲ್ಲಿ ದಸಂಸ ಮುಖಂಡರಾದ ಡಾ.ಪುಟ್ಟಸಿದ್ದಯ್ಯ, ಬೊಕ್ಕಳ್ಳೀ ಮಹದೇವಪ್ಪ, ಚೋರನಹಳ್ಳಿ ಶಿವಣ್ಣ, ಮೂಗೂರು ಸಿದ್ದರಾಜು, ತಲಕಾಡು ಕೆಂಪರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News