ಖೇಲ್ ರತ್ನ, ಅರ್ಜುನ ಪ್ರಶಸ್ತಿ ಪ್ರದಾನ

Update: 2018-09-25 18:28 GMT

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ವೇಟ್ ಲಿಫ್ಟಿಂಗ್ ವರ್ಲ್ಡ್ ಚಾಂಪಿಯನ್ ಮೀರಾಬಾಯಿ ಚಾನು ಅವರಿಗೆ ಮಂಗಳವಾರ ಕ್ರೀಡಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾಗಿರುವ ರಾಜೀವ್ ಗಾಂಧಿ ಖೇಲ್ ರತ್ನ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಕೊಹ್ಲಿ ಅವರಿಗೆ ಪ್ರಶಸ್ತಿ ದೊರೆಯುವುದರೊಂದಿಗೆ 11 ವರ್ಷಗಳ ಬಳಿಕ ಕ್ರಿಕೆಟ್ ಆಟಗಾರನಿಗೆ  ಖೇಲ್ ರತ್ನ ಸಿಕ್ಕಿದೆ. ಕೊಹ್ಲಿಗೆ 2016 ಮತ್ತು 2017ರಲ್ಲಿ ಖೇಲ್ ರತ್ನಕ್ಕೆ ಬಿಸಿಸಿಐ ಶಿಫಾರಸು ಮಾಡಿದ್ದರೂ ಅವರ ಹೆಸರನ್ನು ಖೇಲ್ ರತ್ನ ಆಯ್ಕೆ ಸಮಿತಿ ತಿರಸ್ಕರಿಸಿತ್ತು. ಎರಡು ಬಾರಿ ಖೇಲ್ ರತ್ನ ವಂಚಿತ ಕೊಹ್ಲಿ ಈ ಬಾರಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ತಾಯಿ ಸರೋಜಾ ಕೊಹ್ಲಿ ಮತ್ತು ಅಣ್ಣ ವಿಕಾಸ್ ಕೊಹ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅರ್ಜುನ ಪ್ರಶಸ್ತಿ , ದ್ರೋಣಾಚಾರ್ಯ ಮತ್ತು ಧ್ಯಾನ್ ಚಂದ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಜೋಪ್ರಾ, ಅಥ್ಲೀಟ್‌ಗಳಾದ ಹಿಮಾ ದಾಸ್, ಜಿನ್ಸನ್ ಜಾನ್ಸನ್, ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಸೇರಿದಂತೆ 20 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ , 8 ಮಂದಿಗೆ ದ್ರೋಣಾಚಾರ್ಯ ಮತ್ತು 4 ಮಂದಿ ಧ್ಯಾನ್‌ಚಂದ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor