ಅಮೇರಿಕಾದಲ್ಲಿ ಮುಂಬಯಿ ಕವಿ ಗೋಪಾಲ ತ್ರಾಸಿ ಅವರಿಗೆ ಗೌರವ

Update: 2018-09-25 18:47 GMT

ಮುಂಬಯಿ, ಆ.28: ಅಸೋಸಿಯೇಶನ್ ಆಫ್ ಕನ್ನಡ ಕೂಟ'ಸ್ ಆಫ್ ಅಮೇರಿಕಾ ಸಂಸ್ಥೆಯು ಉತ್ತರ ಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟ ಇದರ ಆಶ್ರಯದಲ್ಲಿ ಇತ್ತೀಚೆಗೆ ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮಾವೇಶ ಸಭಾಗೃಹದಲ್ಲಿ ಆಯೋಜಿಸಿದ್ದ ತ್ರಿದಿನಗಳಲ್ಲಿ 10ನೇ ಅಕ್ಕ ವಿಶ್ವಕನ್ನಡ ಸಮ್ಮೇಳನಕ್ಕೆ ಮುಂಬಯಿನ ಪ್ರತಿಷ್ಠಿತ ಕವಿಯಾಗಿ ಗುರುತಿಸಿಕೊಂಡು ಸಮ್ಮೇಳನಕ್ಕೆ ಆಹ್ವಾನಿತ ಕನ್ನಡದ ಸಂವೇದನಾಶೀಲ ಕವಿ ಗೋಪಾಲ ತ್ರಾಸಿ ನಾಡಿನ ಹೆಸರಾಂತ ಕವಿ ಜಯಂತ್ ಕಾಯ್ಕಿಣಿ ಅಧ್ಯಕ್ಷತೆಯಲ್ಲಿ ಜರಗಿದ 'ಶ್ರಾವಣ ಮಧ್ಯಾಹ್ನ-ಅಕ್ಕ 2018 ಕವಿಗೋಷ್ಠಿ'ಯಲ್ಲಿ ತನ್ನ ಹುಣ್ಣಿಮೆ-ಅಭಗ್ನ ಹಾಗೂ ಹೋಳಿ ಎಂಬ ಎರಡು ಕವಿತೆಗಳನ್ನು  ಪ್ರಸ್ತುತ ಪಡಿಸಿದರು. 

ಗೋಪಾಲ ತ್ರಾಸಿ ಅವರನ್ನು ಅಕ್ಕ ಸಮಿತಿ ಕಾರ್ಯಾಧ್ಯಕ್ಷ ಅಮರ್ ನಾಥ್ ಗೌಡ ಮತ್ತು ಅಕ್ಕ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಕೀಲರ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಅಂತೆಯೇ ತ್ರಾಸಿ ಅವರ ಕಾವ್ಯ ಪ್ರತಿಭೆಯ ಬಹುಮುಖ ಪ್ರತಿಭಾ ಸಂಪನ್ನತೆಯನ್ನು ಗುರುತಿಸಿ ಮೊಂಟ್‍ಗೊಮೆರಿ ಕಂಟ್ರಿ ರಾಜ್ಯ ಕೌನ್ಸಿಲ್ ವತಿಯಿಂದ ಕೌನ್ಸಿಲ್ ಸದಸ್ಯ ರೋಜ್ಹರ್ ಬೆರ್ಲಿನರ್ ಅವರು ತ್ರಾಸಿ ಅವರಿಗೆ ಗೌರವಪತ್ರ ಪ್ರದಾನಿಸಿ ಅಭಿನಂದಿಸಿದರು. ಮುಂಬಯಿಯ ರಾತ್ರಿ ಶಾಲೆಯಿಂದ ಬಂದ ಪ್ರತಿಭೆಗೆ ಸಂದ ಅರ್ಹ ಗೌರವ ಇದಾಗಿದೆ ಎಂದು ತ್ರಾಸಿ ತಿಳಿಸಿದರು. 

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಸದಸ್ಯರೂ ಮತ್ತು ಕ್ರೀಡಾಪಟು ಆಗಿರುವ ತ್ರಾಸಿ ಉಡುಪಿ ಜಿಲ್ಲೆಯ ಕುಂದಾಪುರ ಭರಣಿಮನೆ ಲಿಂಗ ಪೂಜಾರಿ ಉಪ್ಪಿನಕುದುರು ಮತ್ತು ಹೊಸೊಕ್ಲು ಮನೆ ಮುತ್ತು ಪೂಜಾರಿ ತ್ರಾಸಿ ಸುಪುತ್ರರಾಗಿದ್ದು, ಪತ್ನಿ ಸವಿತಾ ಗೋಪಾಲ್, ಮಕ್ಕಳಾದ ಧ್ರುವ ಹಾಗೂ ಅಪೂರ್ವ ಅವರೊಂದಿಗೆ ಮುಂಬಯಿ ಉಪನಗರ ಕಾಂದಿವಿಲಿ ಪಶ್ಚಿಮದ ಚಾರ್ಕೋಪ್‍ನಲ್ಲಿ ವಾಸವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News