ಸಿದ್ಧಾಂತದ ಪಾಠ ಹೇಳಿಕೊಡುವ ಮೂಲಕ ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡಬೇಕು: ಹಮೀದ್‍ಅಲಿ ಶಿಹಾಬ್ ತಂಙಳ್

Update: 2018-09-26 11:56 GMT

ಮೂಡಿಗೆರೆ, ಸೆ.26: ಧಾರ್ಮಿಕ, ಅನಕ್ಷರತೆಯಿಂದ ಕೂಡಿರುವ ಜನರನ್ನು ಸಿದ್ಧಾಂತದ ಪಾಠ ಹೇಳಿಕೊಡುವ ಮೂಲಕ ನಾಗರೀಕ ಸಮಾಜಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿ ಸಜ್ಜುಗೊಳಿಸುವ ಅಗತ್ಯವಿದೆ ಎಂದು ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಅಧ್ಯಕ್ಷ ಸೈಯದ್ ಪಾಣಕಾಡ್ ಹಮೀದ್‍ಅಲಿ ಶಿಹಾಬ್ ತಂಙಳ್ ಹೇಳಿದರು.

ಅವರು ಬುಧಾವಾರ ಪಟ್ಟಣದ ಶಾದಿ ಮಹಲ್‍ನ ಶಂಸುಲ್ ಉಲಮಾ ಸಭಾಂಗಣದಲ್ಲಿ ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ನಿಂದ ಆಯೋಜಿಸಿದ್ದ ಇಬಾದ್ ಕರ್ನಾಟಕ ರಾಜ್ಯ, ಇಶಾಆಃ 1440 ಸುನ್ನಿ ಶೈಕ್ಷಣಿಕ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯ ತನ್ನ ಜೀವಿತ ಅವಧಿಯಲ್ಲಿ ಸನ್ನಡತೆ, ಶಾಂತಿ, ಸಾಮರಸ್ಯ, ಸೌಹಾರ್ದತೆ ಮೂಲಕ ಜಗತ್ತನ್ನೇ ಮೆಚ್ಚಿಕೊಳ್ಳುವ ಗುಣ ಹೊಂದಬೇಕು. ಧಾರ್ಮಿಕ ಹಾಗೂ ಲೌಕಿಕ ಬದುಕಿನಲ್ಲಿ ಯಶಸ್ಸು ಪಡೆಯಲು ಉಭಯರಂಗದಲ್ಲೂ ಸದಾ ಸಿದ್ಧತೆ ನಡೆಸಬೇಕು. ಧಾರ್ಮಿಕ ಅನಕ್ಷರಸ್ಥರನ್ನು ವಿದ್ಯಾವಂತರು ಸರಿದಾರಿಗೆ ತರುವ ಕೆಲಸ ಮಾಡಬೇಕು ಎಂದು ತಿಳಿಸಿದರು. 

ಶಿಕ್ಷಣವನ್ನೇ ಪಡೆಯದವರು ಅಜ್ಞಾನಿಗಳಾಗುತ್ತಾರೆ. ಇಂದಿನ ಆಧುನಿಕ ಭರಾಟೆಯಲ್ಲಿ ಅಜ್ಞಾನ ಎಂಬುವುದು ಎಂತಹ ವಿದ್ಯೆ ಪಡೆದವರನ್ನೂ ಕೂಡ ಕುಸಿಯುವಂತೆ ಮಾಡುತ್ತದೆ. ಹಾಗಾಗಿ ಸುಸಂಸ್ಕೃತಿಯ ಬದುಕು ರೂಪಿಸಲು ವಿದ್ಯಾವಂತ ಯುವಕರು ಆಯಾ ಪ್ರದೇಶಗಳ ಮಸೀದಿ ಮತ್ತು ಅರಬಿಕ್ ಶಾಲೆಗಳಲ್ಲಿ ಅನಕ್ಷರಸ್ಥರನ್ನು ಸೇರಿಸಿ ಸಾಕ್ಷರತೆಯ ಕಡೆಗೆ ಕೊಂಡೊಯ್ಯಲು ಪ್ರಯತ್ನಿಸಬೇಕೆಂದು ತಿಳಿಸಿದರು. 

ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಶೈಖುನಾ ಎಂ.ಟಿ.ಉಸ್ತಾದ್ ಮಾತನಾಡಿ, ದೇಶ ವಿದೇಶಗಳಲ್ಲಿ ತಮ್ಮ ಸಂಸ್ಥೆ ಬೃಹದಾಕಾರವಾಗಿ ಬೆಳೆದಿದ್ದರೂ ಧಾರ್ಮಿಕ ಸಾಕ್ಷರತೆ ಸಂಪೂರ್ಣ ಯಶಸ್ಸು ಕಂಡಿಲ್ಲ. ಬದುಕಿನ ದಾರಿ ಕಂಡುಕೊಳ್ಳಲು ಮನುಷ್ಯನಿಗೆ ಸಾಮಾಜಿಕ ಶಿಕ್ಷಣದ ಅವಶ್ಯಕತೆ ಎಷ್ಟಿದೆಯೋ, ಅಷ್ಟೇ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಶಿಕ್ಷಣದ ಅಗತ್ಯವೂ ಇದೆ. ಮುಂದಿನ 4 ತಿಂಗಳು ಸುನ್ನಿ ಶೈಕ್ಷಣಿಕ ಜಾಗೃತಿ ಅಭಿಯಾನ ರಾಜ್ಯದ 30 ಜಿಲ್ಲೆಗೆ ತೆರಳಿ, ಅಲ್ಲಿರುವ ಅನಕ್ಷರಸ್ಥರನ್ನು ಗುರುತಿಸಿ ಸಾಕ್ಷರನ್ನಾಗಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ಸು ನಮ್ಮ ಬದುಕಿನ ಮಾರ್ಗವನ್ನು ಸುಗಮಗೊಳಿಸಲಿದೆ ಎಂದು ತಿಳಿಸಿದರು. 

ಸೈಯದ್ ಹಮೀದ್ ತಂಙಳ್ ಅಲ್ ಬುಖಾರಿ ಅಭಿಯಾನವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮೂಡಿಗೆರೆ ಖಾಝಿ ಎಂ.ಎ.ಖಾಸಿಂ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಿ.ಕೆ.ಇಬ್ರಾಹಿಂ, ಧರ್ಮಗುರು ಸಯ್ಯದ್ ಬಾದುಷಾ ತಂಙಳ್ ಅಲ್ ಬುಖಾರಿ, ಸಯ್ಯದ್ ಅಸ್ಗರ್ ಅಲಿ ತಂಙಳ್, ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಶೈಖುನಾ ಸತ್ತಾರ್ ಪಂದಲೂರು, ಬದ್ರಿಯಾ ಮಸೀದಿ ಖತೀಬ್ ಯಾಕೂಬ್ ದಾರಿಮಿ, ಇಬಾದ ಕರ್ನಾಟಕ ಚೇರ್ಮನ್ ಮೌಲಾನಾ ಮುಫ್ತಿ ಮಹಮ್ಮದ್ ರಫೀಕ್ ಹುದವಿ ಕೋಲಾರ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಕೇಂದ್ರ ಸಮಿತಿ ಕಾರ್ಯದರ್ಶಿ ಸದಖತುಲ್ಲಾ ಫೈಝೀ, ಹಂಝ ಮುಸ್ಲಿಯಾರ್, ಇರ್ಷಾದ್ ಪೈಝಿ, ಎ.ಸಿ.ಅಯೂಬ್ ಹಾಜಿ, ಸುಲೈಮಾನ್ ಮುಸ್ಲಿಯಾರ್, ಮಹಮ್ಮದ್ ಸಿನಾನ್ ಫೈಝಿ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News