ಕೊಡಗು ಸಂತ್ರಸ್ತರಿಗಾಗಿ ವಿಶೇಷ ಕಾರ್ಯಕ್ರಮ: ಶೀಘ್ರ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಸೂಚನೆ

Update: 2018-09-26 12:13 GMT

ಮಡಿಕೇರಿ, ಸೆ.26 : ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವ ಪ್ರದೇಶದ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಪಶುಸಂಗೋಪನೆ ಇಲಾಖೆಯಿಂದ ವಿಶೇಷ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.  

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಉಪ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಎಲ್ಲಾ ಇಲಾಖೆಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗೆ ಯೋಜನೆಗಳನ್ನು ತಲುಪಿಸಲು ಕಾರ್ಯ ಪ್ರವೃತ್ತರಾಗಬೇಕೆಂದು ನಿರ್ದೇಶನ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳಿಂದ ಯೋಜನೆ ಅನುಷ್ಠಾನದ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಈಗಾಗಲೇ ಜಾರಿಯಲ್ಲಿರುವ ಸೌರ ದೀಪ ವಿತರಣೆಗೆ ಪೂರಕವಾಗಿ ಪ್ರತಿ ಅರ್ಹ ಫಲಾನುಭವಿಗಳ ಮನೆಗಳಿಗೆ ಸೌರ ವಿದ್ಯುತ್ ಸಂಪರ್ಕ ನೀಡಲು ಪರಿಶೀಲಿಸುವಂತೆ ಸೂಚಿಸಿದರು. 

ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಸಾಕಾಣಿಕೆಯ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಕ್ಟೋಬರ್ ತಿಂಗಳ ಒಳಗೆ ಕಾರ್ಯ ಚಟುವಟಿಕೆ ಪ್ರಾರಂಭಿಸಲು ತಿಳಿಸಿದ ಅವರು, ಕೈಗಾರಿಕಾ ಇಲಾಖಾ ಅಧಿಕಾರಿಗಳಿಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವರ್ಗದ ಜನರಿಗೆ ವಿಶೇಷ ಜೀವನೋಪಾಯ ಕಾರ್ಯಕ್ರಮವನ್ನು ಆಯೋಜಿಸಿ ತರಬೇತಿ ನೀಡಿ ಯೋಜನೆಯನ್ನು ತ್ವರಿತವಾಗಿ ತಲುಪಿಸಬೇಕೆಂದು ತಾಕೀತು ಮಾಡಿದರು.

ಐಟಿಡಿಪಿ ಅಧಿಕಾರಿ ಶಿವಕುಮಾರ್ ಅವರು ಯೋಜನೆಯ ಅನುಷ್ಠಾನ ಕುರಿತು ಸಭೆಗೆ ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಯಾದೇವಿ ಗಲಗಲಿ ಅವರು ಇಲಾಖಾ ವತಿಯಿಂದ ಪ್ರಸಕ್ತ ವರ್ಷದ ಕಾರ್ಯಕ್ರಮಗಳು ಹಾಗೂ ಪ್ರಗತಿಯ ವಿವರಗಳನ್ನು ಸಭೆಗೆ ನೀಡಿದರು.

ನಗರಾಭಿವೃದ್ಧಿ ಇಲಾಖಾ ವತಿಯಿಂದ ಕೈಗೊಂಡಿರುವ ಕಾರ್ಯಕ್ರಮಗಳು ಹಾಗೂ ಪ್ರಗತಿ ಸಂಬಂಧಿಸಿದಂತೆ ತೀವ್ರ ಅಸಮದಾನ ವ್ಯಕ್ತಪಡಿಸಿದ ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಈ ಸಂಬಂಧ ಐಟಿಡಿಪಿ ಇಲಾಖಾ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಶೇ.24.1 ಮತ್ತು ಶೇ.17.15 ಕಾರ್ಯಕ್ರಮಗಳಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪ್ರಗತಿ ಸಾಧಿಸುವಂತೆ ತಾಕೀತು ಮಾಡಿದರು. 

ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಪರಿಶಿಷ್ಟ ಜಾತಿ ಉಪಯೋಜನೆ ಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸಿ ಬಾಕಿ ಉಳಿದಿರುವ ಅನುದಾನವನ್ನು ಸಮರ್ಪಕ ರೀತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಚಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಳಸಿಕೊಳ್ಳುವಂತೆ ಜಿ.ಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ಯೋಜನೆಯ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವಾಲ್ಟರ್ ಡಿಮೆಲ್ಲೋ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಿರುವ ಸವಲತ್ತುಗಳ ಕುರಿತು ಸಭೆಗೆ ತಿಳಿಸಿದರು. ಸಭೆಯಲ್ಲಿ ನಾನಾ ಇಲಾಖೆಯ ಅಧಿಕಾರಿಗಳು ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News