ದಸಂಸ ಕಾರ್ಯಕರ್ತರನನ್ನು ರೌಡಿ ಶೀಟರ್ ಪಟ್ಟಿಗೆ ಸೇರಿದ ಪಿಎಸ್‍ಐ: ಆರೋಪ

Update: 2018-09-26 15:13 GMT

ಮೈಸೂರು,ಸೆ.26: ಇಲವಾಲ ಆರಕ್ಷಕ ಠಾಣೆಯಲ್ಲಿ ಈ ಹಿಂದೆ ಪಿಎಸ್‍ಐ ಆಗಿ ಕರ್ತವ್ಯ ನಿರ್ವಹಿಸಿದ ಎಚ್.ಜಿ. ಗಣೇಶ್ ದಸಂಸ ಕಾರ್ಯಕರ್ತ ಪಿ. ಮಹದೇವ್ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡು ರೌಡಿ ಶೀಟರ್ ಪಟ್ಟಿಗೆ ಸೇರಿಸಿದ್ದು, ಕೂಡಲೇ ಅದನ್ನು ರದ್ದು ಪಡಿಸಿ, ಪಿಎಸ್‍ಐ ವಿರುದ್ಧ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿ. ಮಹದೇವ್ ಅವರಿಗೆ ಸಂಬಂಧಿಸಿದಂತೆ ಕುಟುಂಬದ ಆಸ್ತಿ ವಿಷಯದಲ್ಲಿ ಅಣ್ಣ ತಮ್ಮಂದಿರ ನಡುವೆ ಸಣ್ಣ ಪುಟ್ಟ ಗಲಾಟೆ ಆಗಿರುವುದನ್ನು ಹೊರತು ಪಡಿಸಿದರೆ ಅವರ ವಿರುದ್ಧ ಯಾವುದೇ ದೂರು ಇರುವುದಿಲ್ಲ. ಆದರೆ ಪಿಎಸ್‍ಐ ಗಣೇಶ್ ಅವರು ಪಿ. ಮಹದೇವ್ ಅವರ ತಮ್ಮನನ್ನು ಎತ್ತಿಕಟ್ಟಿ ಸುಳ್ಳು ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ, ತಾವು ಟಿಬೆಟಿಯನ್ ನೋಂದಣಿ ಕೇಂದ್ರಕ್ಕೆ ವರ್ಗವಾಗುವ ಮುನ್ನ ಪಿ. ಮಹದೇವ್ ಅವರ ವಿರುದ್ಧ ರೌಡಿ ಶೀಟರ್ ದಾಖಲಿಸಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯಡದೊರೆ ಮಹದೇವಯ್ಯ, ಕೆ.ವಿ. ದೇವೇಂದ್ರ, ದೇವರಾಜು ಬಿಳಿಕೆರೆ, ಕೌದಳ್ಳಿ ಟಿ.ಎಂ. ಗೋವಿಂದರಾಜು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News