ಪ್ರಧಾನಿ ಮೋದಿಗೆ ವಿಶ್ವ ಸಂಸ್ಥೆಯ 'ಚಾಂಪಿಯನ್ಸ್ ಆಫ್ ದಿ ಅರ್ಥ್' ಪ್ರಶಸ್ತಿ

Update: 2018-09-27 06:18 GMT

ನ್ಯೂಯಾರ್ಕ್, ಸೆ. 27: ಭಾರತದ ಪ್ರಧಾನಿ ನರೇಂದ್ರ ಮೋದಿಗೆ ವಿಶ್ವ ಸಂಸ್ಥೆಯ ಅತ್ಯುನ್ನತ ಪರಿಸರ ಪ್ರಶಸ್ತಿ 'ಚಾಂಪಿಯನ್ಸ್ ಆಫ್ ದಿ ಅರ್ಥ್ ಅವಾರ್ಡ್' ಗೌರವ ದೊರಕಿದೆ.

ಅಂತಾರಾಷ್ಟ್ರೀಯ ಸೋಲಾರ್ ಅಲಾಯನ್ಸ್ ಗೆ ಅವರು ಒದಗಿಸಿರುವ ನಾಯಕತ್ವ ಹಾಗೂ ಒಂದು ಬಾರಿ ಮಾತ್ರ ಬಳಕೆ ಮಾಡಬಹುದಾದಂತಹ ಪ್ಲಾಸ್ಟಿಕ್ ಬಳಕೆಯನ್ನು ಭಾರತದಲ್ಲಿ 2022ರೊಳಗಾಗಿ ಅಂತ್ಯಗೊಳಿಸುವ ಅವರ ಬದ್ಧತೆಗಾಗಿ ನೀಡಲಾಗಿದೆ.

ಈ ಪ್ರಶಸ್ತಿಗಾಗಿ ಪರಿಸರ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿ ಬದಲಾವಣೆಯ ಹರಿಕಾರರಾಗಿರುವ ವಿಶ್ವದ ಒಟ್ಟು ಆರು ಮಂದಿಯನ್ನು ಆಯ್ಕೆ ಮಾಡಲಾ ಗಿದೆ. ''ನಮ್ಮ ಕಾಲದ ಕೆಲವೊಂದು ಗಂಭೀರ ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಿರತ ಶ್ರಮವನ್ನು ಧೈರ್ಯದಿಂದ ನಡೆಸುತ್ತಿರುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ'' ಎಂದು ವಿಶ್ವ ಸಂಸ್ಥೆ ಹೇಳಿದೆ.

ಪ್ರಧಾನಿ ಮೋದಿಯ ಜತೆಗೆ ಫ್ರೆಂಚ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ಅವರನ್ನೂ ಅಂತಾರಾಷ್ಟ್ರೀಯ ಸೋಲಾರ್ ಅಲಾಯನ್ಸ್ ಗಾಗಿ ಪಾಲಿಸಿ ಲೀಡರ್‍ಶಿಪ್ ವಿಭಾಗದಲ್ಲಿ  ಈ ಪ್ರಶಸ್ತಿಗೆ ಆರಿಸಲಾಗಿದೆ.

ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ವಿಶ್ವ ಸಂಸ್ಥೆಯ ಪ್ರಶಸ್ತಿ ಪಡೆದುಕೊಂಡಿದ್ದು, ಸುಸ್ಥಿರ ಇಂಧನ ಬಳಕೆ ಕ್ಷೇತ್ರದಲ್ಲಿ ಅದು ಮಾಡಿರುವ ಸಾಧನೆಗೆ ಈ ಗೌರವ ಸಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News