ಸುಸ್ಥಿರ ಪ್ರವಾಸೋದ್ಯಮಕ್ಕೆ ಎಲ್ಲರೂ ಕೈ ಜೋಡಿಸಿ: ಎಸ್‍ಪಿ ಡಾ.ಸುಮನ್ ಡಿ.ಪೆನ್ನೇಕರ್ ಕರೆ
ಮಡಿಕೇರಿ, ಸೆ.27: ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆಗೆ ಪ್ರವಾಸವು ಅತ್ಯಂತ ಮಹತ್ವವಾದುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಪ್ರವಾಸೋದ್ಯಮ ಮತ್ತು ಡಿಜಿಟಲ್ ರೂಪಾಂತರ ಎಂಬ ಸಂದೇಶದೊಂದಿಗೆ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರವಾಸದಿಂದ ಬೇರೆ ಬೇರೆ ಪ್ರದೇಶಗಳ ಸಂಸ್ಕೃತಿ, ಕಲೆ, ಸಾಹಿತ್ಯ, ಭೌಗೋಳಿಕ ಅರಿವು ಪರಿಚಯವಾಗುತ್ತದೆ. ತಾಂತ್ರಿಕತೆಯನ್ನು ಬಳಸಿಕೊಂಡು ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಿ ಸುಸ್ಥಿರ ಪ್ರವಾಸೋದ್ಯಮಕ್ಕೆ ಎಲ್ಲರೂ ಒಂದಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪೆನ್ನೇಕರ್ ಅವರು ನುಡಿದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ, ಪ್ರವಾಸೋದ್ಯಮದಿಂದ ಜ್ಞಾನ ವೃದ್ಧಿಯಾಗುತ್ತದೆ. ತಾಂತ್ರಿಕತೆ ಹಾಗೂ ಡಿಜಿಟಲ್ ರೂಪಾಂತರದಿಂದ ಪ್ರವಾಸೋದ್ಯಮವು ತುಂಬಾ ಜನರಿಗೆ ಉದ್ಯೋಗ ನೀಡುತ್ತದೆ ಎಂದು ಅವರು ತಿಳಿಸಿದರು. ಹೆಚ್ಚಿನ ತಂತ್ರಜ್ಞಾನದಿಂದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಆಗುವ ಅನುಕೂಲಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು. ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಮುಂದಾಗಿ ಜಿಲ್ಲೆಯ ಪ್ರಕೃತಿ ಸೌಂದರ್ಯವನ್ನು ಕಾಪಾಡಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು. ಸಮತೋಲನದಿಂದ ಕಾರ್ಯ ನಿರ್ವಹಿಸಿ ಸುಸ್ಥಿರ ಪ್ರವಾಸೋದ್ಯಮಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ಜಿಲ್ಲೆಯಲ್ಲಿ ಪ್ರಕೃತಿ ಸ್ನೇಹಿ ಪ್ರವಾಸೋದ್ಯಮವನ್ನು ಬೆಳೆಸಲು ನಾವೆಲ್ಲರೂ ಸ್ವಇಚ್ಛೆಯಿಂದ ಮುಂದೆ ಬಂದು ಭಾರತದ ಸ್ಕಾಟ್ ಲ್ಯಾಂಡ್ ಎಂದು ಕರೆಸಿಕೊಳ್ಳುವ ಕೊಡಗನ್ನು ಹಸಿರಾಗಿ ಉಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಅತಿವೃಷ್ಟಿಯಿಂದಾಗಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಸ್ವಲ್ಪ ಪ್ರಮಾಣದ ಹಾನಿಯಾಗಿದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಪ್ರವಾಸೋದ್ಯಮವನ್ನು ಬೆಳೆಸಬೇಕು. ಹಾಗೂ ಮುಂದಿನ ಪೀಳಿಗೆಗೆ ಸುಸ್ಥಿರ ಪ್ರವಾಸೋದ್ಯಮವನ್ನು ಉಳಿಸಿಕೊಡಬೇಕು ಎಂದು ಅವರು ತಿಳಿಸಿದರು. ಅತಿವೃಷ್ಟಿ ಸಂದರ್ಭದಲ್ಲಿ ಜಿಲ್ಲೆಯ ಖಾಸಗಿ ಪ್ರವಾಸೋದ್ಯಮ ಒಕ್ಕೂಟಗಳು ಉತ್ತಮ ರೀತಿಯಲ್ಲಿ ಸಹಕರಿಸಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ.ಟಿ.ಡಿ.ತಿಮ್ಮಯ್ಯ ಅವರು ಮಾತನಾಡಿ ಪ್ರವಾಸೋದ್ಯಮವು ದೇಶದ ಆರ್ಥಿಕ ಬೆಳೆವಣಿಗೆಗೆ ಮಹತ್ತರ ಪಾತ್ರವನ್ನು ನೀಡುತ್ತಿದ್ದು, ದೇಶದಲ್ಲಿ 1990ರ ನಂತರ ಅತೀ ವೇಗವಾಗಿ ಪ್ರವಾಸೋದ್ಯಮವು ಬೆಳೆಯುತ್ತಿದ್ದು, ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತಿರುವುದಾಗಿ ಅವರು ತಿಳಿಸಿದರು.
ಕೊಡಗಿನ ಪ್ರವಾಸೋದ್ಯಮ ಪರಿಸರ ಸ್ನೇಹಿಯಾಗಿ ಮಾಡಲು ಎಲ್ಲರೂ ಬದ್ಧರಾಗಿರಬೇಕು. ಪ್ರಕೃತಿಯ ಮೇಲೆ ನಕರಾತ್ಮಕ ಅಂಶಗಳು ಬೀರದಂತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಬೇಕು. ಇದರಿಂದ ಸ್ಥಳೀಯ ಜನರ ಆರ್ಥಿಕ ಮಟ್ಟವು ಸುಧಾರಣೆಯಾಗುವುದರ ಜೊತೆಗೆ ಕೊಡಗಿನ ಕಲೆ, ಸಂಸ್ಕøತಿ, ಜಗತ್ತಿಗೆ ಅನಾವರಣಗೊಳ್ಳುತ್ತದೆ. ಹಾಗೂ ಇದರ ಜೊತೆಯಲ್ಲಿಯೇ ಸ್ಥಳೀಯ ಜೀವ ವೈವಿದ್ಯತೆಗೆ ಧಕ್ಕೆಯಾಗದಂತೆ ಸುಸ್ಥಿರ ಪ್ರವಾಸೋದ್ಯಮಕ್ಕೆ ಎಲ್ಲರೂ ಕಠಿಬದ್ಧರಾಗಿರಬೇಕು. ಪ್ರವಾಸೋದ್ಯಮದಿಂದ ಕೊಡಗನ್ನು ಪರಿಸರ ಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಅತ್ಯಂತ ಮಹತ್ತರವಾದುದು ಎಂದು ಅವರು ತಿಳಿಸಿದರು.
ಕೊಡಗು ಜಿಲ್ಲಾ ಹೋಟೆಲ್ ಮತ್ತು ರೆಸಾರ್ಟ್ ಒಕ್ಕೂಟದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಪ್ರವಾಸೋದ್ಯಮದಿಂದ ಬೇರೆ ಬೇರೆ ಪ್ರದೇಶದ ಸಂಸ್ಕೃತಿ, ಕಲೆ, ಆಚಾರ, ವಿಚಾರಗಳನ್ನು ತಿಳಿದುಕೊಳ್ಳಬಹುದು. ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಮೊದಲಿನಂತೆ ನಿರ್ಮಾಣ ಮಾಡಲು ಎಲ್ಲರೂ ಪ್ರಯತ್ನಿಸೋಣ ಎಂದು ಅವರು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಗನ್ನಾಥ್ ಮಾತನಾಡಿ ಉದ್ಯೋಗ ಅವಕಾಶದಲ್ಲಿ ಪ್ರವಾಸೋದ್ಯಮ ಮಹತ್ವದ ಪಾತ್ರ ಹೊಂದಿದೆ. ನೂರು ಜನರಲ್ಲಿ ಒಂಬತ್ತು ಜನರು ಪ್ರವಾಸೋದ್ಯಮದಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ ಎಂದು ಪ್ರವಾಸೋದ್ಯಮದಲ್ಲಿ ಉದ್ಯೋಗದ ಮಹತ್ವವನ್ನು ತಿಳಿಸಿದರು.
ಅತಿವೃಷ್ಟಿ ಸಂದರ್ಭ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಪ್ರವಾಸೋದ್ಯಮದ ಅಭಿವೃದ್ಧಿ ಕುರಿತು ಅಭಿಪ್ರಾಯವನ್ನು ಹಂಚಿಕೊಂಡರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಸಾವನ್ನಪ್ಪಿದ ಜನರಿಗೆ ಸಂತಾಪ ಸೂಚಿಸಲಾಯಿತು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪಾರ್ವತಿ ಅಪ್ಪಯ್ಯ, ಕೊಡಗು ಜಿಲ್ಲಾ ಟೂರ್ಸ್ ಅಂಡ್ ಟ್ರಾವಲ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಸತ್ಯ, ಕೊಡಗು ಜಿಲ್ಲಾ ಕೈಗಾರಿಕಾ ಒಕ್ಕೂಟದ ಗಣೇಶ್ ಇತರರು ಇದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ಅವರು ನಿರೂಪಿಸಿದರು.