×
Ad

ಅಬ್ಬಿ ಜಲಪಾತ ವೀಕ್ಷಣೆ: ಲಘು ವಾಹನ ಸಂಚಾರಕ್ಕೆ ಅವಕಾಶ

Update: 2018-09-27 17:40 IST

ಮಡಿಕೇರಿ, ಸೆ.27: ಕೊಡಗು ಜಿಲ್ಲೆಯು ಪ್ರಕೃತಿ ಸೌಂದರ್ಯದ ನೆಲೆಬೀಡಾಗಿದ್ದು, ಪ್ರಕೃತಿ ಸೌಂದರ್ಯವನ್ನು ಮತ್ತು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಮಡಿಕೇರಿ ತಾಲೂಕಿನ ಅಬ್ಬಿ ಜಲಪಾತ, ಮಾಂದಲ್‍ಪಟ್ಟಿ ಮತ್ತು ತಡಿಯಂಡಮೋಳ್ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಪೂರ್ಣವಾಗಿ ದುರಸ್ಥಿಗೊಳ್ಳದೇ ಇರುವುದರಿಂದ ಸುರಕ್ಷತಾ ಹಿತದೃಷ್ಟಿಯಿಂದ ಪ್ರವಾಸಿಗರು ಈ ಸ್ಥಳಗಳಿಗೆ ತೆರಳದಂತೆ ಈ ಹಿಂದೆ ಕೋರಲಾಗಿತ್ತು.

ಪ್ರಸ್ತುತ ಮಡಿಕೇರಿ ತಾಲೂಕಿನ ಅಬ್ಬಿ ಜಲಪಾತ ಸಂಪರ್ಕ ರಸ್ತೆಯ ತುರ್ತು ದುರಸ್ಥಿ ಕಾರ್ಯವನ್ನು ಸಂಬಂಧಪಟ್ಟ ಇಲಾಖೆಯಾದ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡು ಪೂರ್ಣಗೊಳಿಸಲಾಗಿದ್ದು, ಲಘು ವಾಹನ ಸಂಚಾರ ಯೋಗ್ಯ ರಸ್ತೆಯನ್ನು ನಿರ್ಮಿಸಲಾಗಿದೆ. ಆದುದರಿಂದ ಅಬ್ಬಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಲಘು ವಾಹನಗಳ ಮೂಲಕ ತೆರಳಬಹುದಾಗಿದೆ. ಅಲ್ಲದೆ, ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಪ್ರದೇಶಗಳ ಪುನರ್ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿರುವುದರಿಂದ ಪ್ರವಾಸಿಗರು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕಾಗಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.

ಭಾರೀ ಗಾಳಿ ಮಳೆಯಿಂದ ಮಡಿಕೇರಿ ನಗರದ ಸುತ್ತಮುತ್ತ ಹಾಗೂ ಜಿಲ್ಲೆಯ ಹಲವೆಡೆ ಪ್ರವಾಹ ಮತ್ತು ಭೂಕುಸಿತದಿಂದ ಮಾನವ/ ಜಾನುವಾರು ಜೀವಹಾನಿ, ಮನೆಹಾನಿ, ರಸ್ತೆಹಾನಿ ಸೇರಿದಂತೆ ಹಲವು ನಷ್ಟ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News