ನಸೀರ್ ಅಹ್ಮದ್, ವೇಣುಗೋಪಾಲ್, ರಮೇಶ್‌ಗೌಡ ವಿಧಾನ ಪರಿಷತ್ತಿಗೆ ಅವಿರೋಧ ಆಯ್ಕೆ

Update: 2018-09-27 13:07 GMT

ಬೆಂಗಳೂರು, ಸೆ. 27: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಕಾಂಗ್ರೆಸಿನ ನಸೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್ ಹಾಗೂ ಜೆಡಿಎಸ್‌ನ ರಮೇಶ್‌ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕುಮಾರಸ್ವಾಮಿ ಇಂದಿಲ್ಲಿ ಪ್ರಕಟಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದ ನಸೀರ್ ಅಹ್ಮದ್, ಎಂ.ಸಿ.ವೇಣುಗೋಪಾಲ್ ಹಾಗೂ ರಮೇಶ್‌ಗೌಡ ಅವರಿಗೆ ಪ್ರಮಾಣ ಪತ್ರ ವಿತರಿಸಿದರು. ಆ ಬಳಿಕ ಮಾತನಾಡಿದ ಅವರು, ನಾಮಪತ್ರ ಹಿಂಪಡೆಯಲು ಇಂದು (ಸೆ.27) ಮಧ್ಯಾಹ್ನ 3 ಗಂಟೆಯ ವರೆಗೆ ಅವಕಾಶ ಇತ್ತು. ಕಣದಲ್ಲಿದ್ದ ಮೂರು ಮಂದಿಯ ಪೈಕಿ ಯಾರೊಬ್ಬರೂ ನಾಮಪತ್ರ ಹಿಂಪಡೆಯದ ಹಿನ್ನೆಲೆಯಲ್ಲಿ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಲಾಗಿದೆ. ಪಕ್ಷೇತರ ಅಭ್ಯರ್ಥಿಗಳಾಗಿರುವ ವೆಂಕಟೇಶ್ವರ ಸ್ವಾಮಿ, ಹರಿಶ್ಚಂದ್ರಗೌಡ ಅವರಿಗೆ ಸೂಚಕರ ಸಹಿ ಇಲ್ಲದ ಕಾರಣ ನಾಮಪತ್ರ ತಿರಸ್ಕೃತಗೊಂಡಿದ್ದವು ಎಂದರು.

ಪರಿಷತ್ತಿನ ನೂತನ ಸದಸ್ಯರಾದ ನಸೀರ್ ಅಹ್ಮದ್ ಮತ್ತು ಎಂ.ಸಿ.ವೇಣುಗೋಪಾಲ್ ಅವರ ಅವಧಿ 2020ರ ಜೂನ್ 30ರ ವರೆಗೆ ಹಾಗೂ ರಮೇಶ್‌ಗೌಡ ಅವರ ಅವಧಿ 2022ರ ಜೂನ್ 14ರ ವರೆಗೆ ಇರಲಿದೆ ಎಂದು ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News