×
Ad

ಜೋಡುಪಾಲದಲ್ಲಿ ಮಾನವ ಅಸ್ಥಿಪಂಜರ ಪತ್ತೆ

Update: 2018-09-27 19:42 IST
ಸಾಂದರ್ಭಿಕ ಚಿತ್ರ

ಮಡಿಕೇರಿ, ಸೆ.27: ಭೂ ಕುಸಿತ ಮತ್ತು ಜಲ ಪ್ರಳಯಕ್ಕೆ ತುತ್ತಾಗಿರುವ ಜೋಡುಪಾಲದ ಬಳಿ ಮಾನವ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಆಗಸ್ಟ್ 16ರಂದು ಭೂ ಕುಸಿತ ಮತ್ತು ನದಿ ಪ್ರವಾಹಕ್ಕೆ ಸಿಲುಕಿ ಕಣ್ಮರೆಯಾಗಿದ್ದ ಮಂಜುಳ(15) ಕಳೇಬರ ಇದಾಗಿರಬಹುದೆಂದು ಶಂಕಿಸಲಾಗಿದ್ದು, ವೈದ್ಯಕೀಯ ಮೂಲಗಳು ಮತ್ತು ಪೊಲೀಸರು ಇದನ್ನು ದೃಢಪಡಿಸಿಲ್ಲ. 

ಮೃತದೇಹದ ಕಳೇಬರ ಮಾತ್ರವೇ ಪತ್ತೆಯಾಗಿರುವುದರಿಂದ ಮಂಜುಳಾ ಅವರ ಪೋಷಕರು ಕೂಡ ಇದನ್ನು ಖಾತರಿಪಡಿಸಲು ಸಾಧ್ಯವಾಗಿಲ್ಲ. ಕಳೆದ 41 ದಿನಗಳವರೆಗೆ ಮೃತಳ ಪೋಷಕರು ಮತ್ತು ಕುಟುಂಬಸ್ಥರು ಜೋಡುಪಾಲ ವ್ಯಾಪ್ತಿಯಲ್ಲಿ ಭೂ ಸಮಾಧಿಯಾದ ಮಂಜುಳಾಗೆ ನಿರಂತರ ಶೋಧ ನಡೆಸುತ್ತಿದ್ದರು. ಈ ಸಂದರ್ಭ ಗುರುವಾರ ಬೆಳಗ್ಗೆ 11 ಗಂಟೆಗೆ ಸಮಯದಲ್ಲಿ ಆಕೆ ವಾಸವಿದ್ದ ಮನೆಯ 1 ಕಿ.ಮೀ. ದೂರದಲ್ಲಿ ಮಾನವನ ಅಸ್ಥಿಪಂಜರ ಪತ್ತೆಯಾಗಿತ್ತು. 

ಮಾಹಿತಿ ಅರಿತ ಮಡಿಕೇರಿ ಗ್ರಾಮಾಂತರ ಪೊಲೀಸರು ಅತ್ತ ತೆರಳಿ ಪರಿಶೀಲನೆ ನಡೆಸಿ, ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದರು. ಸ್ಥಳಕ್ಕೆ ತೆರಳಿ ಅಸ್ಥಿಪಂಜರವನ್ನು ಪರೀಕ್ಷಿಸಿದ ವೈದ್ಯರು ಮೂಳೆಗಳು ಮನುಷ್ಯರದ್ದೆ ಎಂಬುದನ್ನು ಮಾತ್ರ ಖಚಿತ ಪಡಿಸಿದರು. 
ಈಗ ಸಿಕ್ಕಿರುವ ಅಸ್ಥಿಪಂಜರವನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸದೆ ಇದು ಮಂಜುಳಾ ಅವರ ಮೃತದೇಹದ ಕಳೇಬರ ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ವೈದ್ಯರು ಮತ್ತು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಮೃತದೇಹದ ಕಳೇಬರ ಯಾರದ್ದು ಎಂಬ ಪ್ರಶ್ನೆ ಉದ್ಬವಿಸಿದೆ.

ಮೂಲತಃ ಬೆಟ್ಟತ್ತೂರಿನ ನಿವಾಸಿ ಸೋಮಯ್ಯ ಅವರ ಪುತ್ರಿ ಮಂಜಳಾ, ಮದೆನಾಡಿನ ಮದೆಮಹೇಶ್ವರ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದಳು. ಆಕೆಗೆ ಜೋಡುಪಾಲದ ತನ್ನ ಸಂಬಂಧಿಕರಾದ ಬಸಪ್ಪ ಅವರ ಮನೆಯಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟತ್ತೂರಿನಿಂದ ಮದೆನಾಡು ಕಡೆಗೆ ಒಂದೇ ಬಸ್ ವ್ಯವಸ್ಥೆ ಇದ್ದ ಹಿನ್ನೆಲೆಯಲ್ಲಿ ಜೋಡುಪಾಲದಲ್ಲಿ ಉಳಿದುಕೊಂಡು ಮಂಜುಳ ವ್ಯಾಸಂಗ ಮುಂದುವರಿಸಿದ್ದಳು.

ಆದರೆ, ಆಗಸ್ಟ್ 16ರಂದು ಬೆಳಗ್ಗೆ 8 ಗಂಟೆ ಸಮಯದಲ್ಲಿ ಸುರಿದ ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತ ಮತ್ತು ಜಲ ಪ್ರಳಯದಿಂದಾಗಿ ಬಸಪ್ಪ ಅವರ ಮನೆಯ ಮೇಲೆ ಗುಡ್ಡ ಕುಸಿದಿತ್ತಲ್ಲದೆ, ನದಿ ನೀರು ಕೂಡ ನುಗ್ಗಿತ್ತು. ಈ ಸಂದರ್ಭ ಮನೆಯಲ್ಲಿದ್ದ ಬಸಪ್ಪ, ಗೌರಮ್ಮ, ಮೋನಿಶಾ ಸೇರಿದಂತೆ ಮಂಜುಳಾ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದ್ದಳು. 

ಆ ಬಳಿಕ ಸೇನಾ ತಂಡ, ಅರೆ ಸೇನಾ ಪಡೆ, ಸಿಆರ್‍ಪಿಎಫ್, ಪೊಲೀಸರು ಡ್ರೋನ್ ಕ್ಯಾಮರಾ ಬಳಸಿ ನಡೆಸಿದ ಶೋಧ ಕಾರ್ಯದಲ್ಲಿ ಮಂಜುಳಾ ಹೊರತುಪಡಿಸಿ ಮೂವರ ಮೃತದೇಹಗಳು ಪತ್ತೆಯಾಗಿ ಅಂತ್ಯಸಂಸ್ಕಾರವೂ ನಡೆದಿತ್ತು. ಆದರೆ ಮಂಜುಳಾ ಕಣ್ಮರೆಯಾಗಿ 40 ದಿನ ಕಳೆದರೂ ಆಕೆಯ ಮೃತದೇಹ ಪತ್ತೆಯಾಗಿರಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News