ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯಲ್ಲಿ ಸದಸ್ಯನಾಗುವ ಇಚ್ಛೆ ಇದೆ: ಎಚ್.ವಿಶ್ವನಾಥ್

Update: 2018-09-27 14:57 GMT

ಬೆಂಗಳೂರು, ಸೆ.27: ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯಲ್ಲಿ ಸದಸ್ಯನಾಗುವ ಇಚ್ಛೆ ಇದೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ಮುಂದಿನ ಕ್ರಮ ಅವರು ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.

ಗುರುವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮನ್ವಯ ಸಮಿತಿಗೆ ತನ್ನನ್ನು ಸೇರಿಸಿಕೊಳ್ಳುವಂತೆ ಈಗಾಗಲೇ ಪ್ರಸ್ತಾಪಿಸಿದ್ದೇನೆ. ರಾಜ್ಯಾಧ್ಯಕ್ಷನಾದ ತಕ್ಷಣ ಸಮನ್ವಯ ಸಮಿತಿಗೆ ಸೇರಲು ಸಾಧ್ಯವಿಲ್ಲ. ಈ ಬಗ್ಗೆ ಎರಡು ಪಕ್ಷದ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮನ್ವಯ ಸಮಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷದ ಅಧ್ಯಕ್ಷರು ಸೇರ್ಪಡೆಗೊಂಡಾಗಲೆ ಸಮನ್ವಯ ಸಮಿತಿ ಪರಿಪೂರ್ಣಗೊಳ್ಳುವುದು. ಈ ಬಗ್ಗೆ ಎರಡೂ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದು, ಈ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಶೀಘ್ರವೆ ಸಮನ್ವಯ ಸಮಿತಿಗೆ ಸೇರ್ಪಡೆಗೊಳ್ಳಲಿದ್ದೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ರಮೇಶ್ ಗೌಡ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಅವರನ್ನು ವಿಧಾನಪರಿಷತ್‌ಗೆ ಏಕೆ ಆಯ್ಕೆ ಮಾಡಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕ್ರಿಮಿನಲ್ ಹಿನ್ನೆಲೆ ಯಾರಿಗೆ ಇಲ್ಲ ಹೇಳಿ? ರಾಜಕೀಯದಲ್ಲಿ ಇಂಥ ಬೆಳವಣಿಗೆಗಳು ಸಹಜ ಎಂದು ನುಡಿದರು.

ನಾಳೆ ಅಥೆನ್ಸ್ ರಾಜ್ಯಾಡಳಿತ ಕೃತಿ ಬಿಡುಗಡೆ: ಜಗತ್ತಿನ ಪ್ರಾಚೀನ ಸಂಸದೀಯ ಇತಿಹಾಸದ ಕಥನ ಕುರಿತ ಅಥೆನ್ಸ್ ರಾಜ್ಯಾಡಳಿತ ಪುಸ್ತಕ ಸೆ. 29ರಂದು ಶನಿವಾರ ಲೋಕಾರ್ಪಣೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

ಅಥೆನ್ಸ್ ರಾಜ್ಯಾಡಳಿತ ಕೃತಿಯಲ್ಲಿ ಎರಡು ಸಾವಿರ ವರ್ಷಗಳ ಹಿಂದೆಯೇ ಗ್ರೀಸ್‌ನಲ್ಲಿ ಜನಾಡಳಿತ ಇದ್ದ ಬಗ್ಗೆ ಉಲ್ಲೇಖ ಇದೆ. ಅಂದಿನ ಕಾಲದಲ್ಲೇ ಪ್ರಜಾಪ್ರಭುತ್ವ ವಾತಾವರಣ ಹೇಗಿತ್ತು ಎಂಬುದನ್ನು ವಿವರವಾಗಿ ಬರೆದಿದ್ದೇನೆ. ಹೀಗಾಗಿ ನಾನು ಬರೆದಿರುವ ಈ ಪುಸ್ತಕವನ್ನು ಗ್ರೀಸ್ ದೇಶದ ಪಾರ್ಲಿಮೆಂಟಿಗೆ ಸಲ್ಲಿಸಲಿದ್ದೇನೆಂದು ಅವರು ಹೇಳಿದರು.

ಹಳ್ಳಿ ಹಕ್ಕಿ ಪ್ರಕಾಶನ ಮೈಸೂರು ಇದರ ಸಹಯೋಗದೊಂದಿಗೆ ಪುಸ್ತಕ ಹೊರತಂದಿದ್ದು, ಶನಿವಾರ ಬೆಳಗ್ಗೆ 11ಗಂಟೆಗೆ ಬೆಂಗಳೂರಿನ ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಲಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪುಸ್ತಕ ಲೋಕಾರ್ಪಣೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ, ನಿವೃತ್ತ ನ್ಯಾ.ಎನ್.ಸಂತೋಷ್ ಹೆಗ್ಡೆ, ಪತ್ರಕರ್ತ ಬಿ.ಎಂ.ಹನೀಫ್ ಸೇರಿದಂತೆ ಪ್ರಮುಖ ಗಣ್ಯರು ಭಾಗಿಯಾಗುವರು ಎಂದು ವಿಶ್ವನಾಥ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News