‘ಆಧಾರ್’ ಸುಪ್ರೀಂ ತೀರ್ಪು ಸ್ವಾಗತಾರ್ಹ: ಶಾಸಕ ಟಿ.ಡಿ.ರಾಜೇಗೌಡ

Update: 2018-09-27 16:07 GMT

ಬೆಂಗಳೂರು, ಸೆ.27: ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಜಾರಿಗೆ ತಂದ ಆಧಾರ್ ಯೋಜನೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹವಾದುದು. ಬಡವರಿಗಾಗಿ ಜಾರಿಗೆ ತಂದ ಅನೇಕ ಯೋಜನೆಯ ಲಾಭ ಇಂದು ಆಧಾರ್ ಯೋಜನೆಯ ಮೂಲಕ ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗೆ ದೊರೆಯುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ದೇಶದ ಅಭಿವೃದ್ಧಿಯ ದೂರ ದೃಷ್ಟಿಯಿಂದ ತಂದ ಯೋಜನೆಯನ್ನು ಬಿಜೆಪಿ ವಿರೋಧ ಪಕ್ಷವಾಗಿದ್ದಾಗ ಉಗ್ರವಾಗಿ ವಿರೋಧಿಸಿತ್ತು. ಇಂದು ಈಗ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ಬಡವರ ಉದ್ಧಾರಕ್ಕಾಗಿ ತಂದ ಯೋಜನೆಯನ್ನು ಬಿಜೆಪಿ ತನ್ನ ಲಾಭದಾಯಕ ಖಾಸಗಿ ಕಂಪೆನಿಗಳ ಅನುಕೂಲಕ್ಕಾಗಿ ಬಳಸಿಕೊಳ್ಳಲು ಮತ್ತು ದೇಶದ ಜನರಿಗೆ ಅನಾನುಕೂಲ ಮಾಡಲು ಹಲವು ಲಾಭದಾಯಕ ವ್ಯವಹಾರಗಳನ್ನು ಆಧಾರ್ ಮೂಲಕ ಜಾರಿಗೆ ತರಲು ಪ್ರಯತ್ನಿಸಿತ್ತು ಎಂದು ಅವರು ಆರೋಪಿಸಿದ್ದಾರೆ.

ಜನರ ಖಾಸಗಿ ಮಾಹಿತಿಯನ್ನು ಸರಕಾರ ಹೊರತುಪಡಿಸಿ ಖಾಸಗಿ ಕಂಪೆನಿಗಳು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿರುವುದು ಬಿಜೆಪಿಯ ವ್ಯಾಪಾರಿ ಮನೋಭಾವಕ್ಕೆ ತೀವ್ರ ಹಿನ್ನಡೆಯಾಗಿದೆ. ಜನ ಎಚ್ಚೆತ್ತುಕೊಳ್ಳದಿದ್ದರೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಆಧಾರ್ ಉಪಯೋಗಿಸಿ ಬಡವರ, ರೈತರ ಮತ್ತು ಕಾರ್ಮಿಕರ ಬದುಕನ್ನು ಮತ್ತಷ್ಟು ಕಷ್ಟಕ್ಕೆ ತಳ್ಳಲಿದೆ ಎಂದು ರಾಜೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಗೃಹ ಬಳಕೆಯ ಅನಿಲ ಸಿಲಿಂಡರ್‌ನ ಸಬ್ಸಿಡಿ ಹಣವನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ ಎಂದು ಸಬ್ಸಿಡಿ ಹೆಸರಿನಲ್ಲಿ ಅನಿಲ ಸಿಲಿಂಡರ್ ಬೆಲೆಯನ್ನು ಯುಪಿಎ ಸರಕಾರದ ಅವಧಿಗಿಂತ ದುಪ್ಪಟ್ಟು ಮಾಡಿದೆ. ಮುಂದೆ ಸಬ್ಸಿಡಿ ಹಣವನ್ನು ನೇರವಾಗಿ ಜನರ ಖಾತೆಗೆ ಜಮಾ ಮಾಡಿ ಪಡಿತರ ಅಕ್ಕಿಯನ್ನು ಮಾರುಕಟ್ಟೆ ಬೆಲೆಯಲ್ಲಿ ಪಡೆಯಿರಿ ಎನ್ನಬಹುದು ಎಂದು ಅವರು ಹೇಳಿದ್ದಾರೆ.

ಜನ ಸಾಮಾನ್ಯರು ಉಚಿತವಾಗಿ ಅಕ್ಕಿ ಪಡೆಯುವುದು ಅವರ ಹಕ್ಕು. ಆದರೆ, ಸಬ್ಸಿಡಿ ಪಡೆಯುವುದು ಔದಾರ್ಯ. 28 ರೂ.ಗಳ ಸಬ್ಸಿಡಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ನೀಡುತ್ತೇವೆ. ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿ ಎಂದರೆ ಅಕ್ಕಿಗೆ ಚಿನ್ನದ ಬೆಲೆಯಾದೀತು. ಬಿಜೆಪಿ ವ್ಯಾಪಾರಿಗಳ ಪಕ್ಷ, ಅವರಿಗೆ ಜನಸಾಮಾನ್ಯರ ಯೋಗ ಕ್ಷೇಮಕ್ಕಿಂತ ಲಾಭವೇ ಪ್ರದಾನ ಎಂದು ರಾಜೇಗೌಡ ಟೀಕಿಸಿದ್ದಾರೆ.

ಲಾಭದ ದೃಷ್ಟಿಯಿಂದ ದೇಶದ ಕೋಟ್ಯಂತರ ಜನರ ಖಾಸಗಿ ಮಾಹಿತಿಗಳನ್ನು ತನ್ನ ಮಿತ್ರರ ಮೊಬೈಲ್ ಕಂಪೆನಿಗಳಿಗೆ ನೀಡಿದ್ದಾರೆ. ಅದೇ ಮೊಬೈಲ್ ಕಂಪೆನಿಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಕೂಡಲೇ ಸುಪ್ರೀಂಕೋರ್ಟ್ ತೀರ್ಪಿನಂತೆ ಖಾಸಗಿ ಕಂಪೆನಿಗಳು ಪಡೆದಿರುವ ದೇಶದ ಜನರ ಖಾಸಗಿ ಮಾಹಿತಿಗಳನ್ನು ಹಿಂದಕ್ಕೆ ಪಡೆದು ನಾಶಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಯೋಜನೆಯನ್ನು ಯುಪಿಎ ಸರಕಾರ ತಂದ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಜಾರಿಗೆ ತರಬೇಕು. ಆಧಾರ್ ಯೋಜನೆ ಜನಸಾಮಾನ್ಯರ ಬದುಕಿಗೆ ಭದ್ರತೆ ಮತ್ತು ಲಾಭದಾಯಕವಾಗಿ ಇರುವಂತೆ ಕಾನೂನು ರೂಪಿಸಬೇಕು. ಬಿಜೆಪಿ ಲೋಕಸಭೆಯಲ್ಲಿ ತನಗಿರುವ ಬಹುಮತದ ಮೂಲಕ ಈ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಮಂಡಿಸಿರುವುದನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತೀವ್ರ ವಿಮರ್ಶೆಗೆ ಒಳಪಡಿಸಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯದೆ ಈ ಮಸೂದೆ ಜಾರಿಗೆ ತಂದಿರುವುದು ಪ್ರಜಾತಂತ್ರಕ್ಕೆ ಮಾರಕವಾದುದು. ಕಾಂಗ್ರೆಸ್ ಪಕ್ಷ ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ಮುಂದುವರೆಸಲಿದೆ. ಆಧಾರ್ ಯೋಜನೆಯನ್ನು ಸಂವಿಧಾನ ಬದ್ಧ ಎಂದಿರುವುದು ಕಾಂಗ್ರೆಸ್ ಪಕ್ಷಕ್ಕೆ ಸಂದ ಜಯವಾಗಿದೆ ಎಂದು ರಾಜೇಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News