ವಿಶ್ವಕರ್ಮ ಸಮುದಾಯಕ್ಕೆ ಅಗತ್ಯ ನೆರವು: ಸಚಿವ ಪುಟ್ಟರಾಜು ಭರವಸೆ

Update: 2018-09-27 17:57 GMT

ಮಂಡ್ಯ, ಸೆ.27: ಸಮಾಜದ ಅಭಿವೃದ್ಧಿಗೆ ಪೂರಕವಾಗಿರುವ ವಿಶ್ವಕರ್ಮ ಸಮುದಾಯಕ್ಕೆ ಅಗತ್ಯ ನೆರವು ಕಲ್ಪಿಸುವುದಾಗಿ ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದ್ದಾರೆ.

ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಕೃಷಿಕರಿಗೆ ಬೇಸಾಯ ಮಾಡಲು ಅಗತ್ಯ ಉಪಕರಣಗಳನ್ನು ತಯಾರಿಸಿಕೊಡುವುದರಿಂದ ಹಿಡಿದು ಮನೆ ಕಟ್ಟುವುದು ಸೇರಿದಂತೆ ಎಲ್ಲಾ ನಿರ್ಮಾಣ ಕಾರ್ಯದಲ್ಲೂ ವಿಶ್ವಕರ್ಮರ ಕೊಡುಗೆ ಅನನ್ಯವಾದುದು ಎಂದು ಅವರು ಹೇಳಿದರು.

ಕುಶಲಕಲೆಗಳಲ್ಲಿ ನಿಷ್ಣಾತರಾದ ಈ ಜನಾಂಗಕ್ಕೆ ಮಂಡ್ಯ ನಗರದಲ್ಲಿ ಸಮುದಾಯ ಭವನ ಹಾಗೂ ನಿವೇಶನ ದೊರಕಿಸುವ ಅಗತ್ಯವಿದೆ. ಅದಕ್ಕಾಗಿ ಸರಕಾರದಿಂದ ದೊರಕುವ ಎಲ್ಲಾ ಸೌಲಭ್ಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ವಧು-ವರರ ಅಲಂಕಾರದಲ್ಲಿ ಚಿನ್ನ, ಬೆಳ್ಳಿ, ಆಭರಣಗಳ ಮಹತ್ವವಿದೆ. ಅದರ ಹಿಂದೆ ವಿಶ್ವಕರ್ಮರ ಪರಿಶ್ರಮವಿದೆ. ಹಾಗಾಗಿ ಎಲ್ಲಾ ನಿರ್ಮಾಣ ಕಾರ್ಯದಲ್ಲೂ ಸಮುದಾಯದ ಪರಿಶ್ರಮವನ್ನು ಕಾಣಬಹುದು. ಈ ನಿಟ್ಟಿನಲ್ಲಿ ಜನಾಂಗಕ್ಕೆ ಸೂಕ್ತ ನಿವೇಶನ ಕಲ್ಪಿಸಿಕೊಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ತಿರುಮಲಾಚಾರ್ ಮಾತನಾಡಿ, ಸಮುದಾಯಕ್ಕೆ ಅಗತ್ಯವಿರುವ ವಿದ್ಯಾರ್ಥಿ ನಿಲಯ, ನಗರ ಮತ್ತು ಗ್ರಾಮೀಣ ಪ್ರದೇಶದ ಸ್ವಂತ ಸೂರಿಲ್ಲದವರಿಗೆ ನಿವೇಶನ ಒದಗಿಸಬೇಕು, ನಿಗಮ ಮಂಡಳಿಗಳಲ್ಲಿ ಸಮುದಾಯದವರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ತಾಪಂ ಅಧ್ಯಕ್ಷೆ ಶೈಲಜಾ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಜಿಪಂ ಉಪಕಾರ್ಯದರ್ಶಿ ಪ್ರೇಮಕುಮಾರ್, ತಹಶೀಲ್ದಾರ್ ಎಲ್.ನಾಗೇಶ್, ಜೆಡಿಎಸ್ ಮುಖಂಡರಾದ ಲಕ್ಷ್ಮಿಅಶ್ವಿನ್‍ಗೌಡ, ನಗರಸಭೆ ಸದಸ್ಯ ಬಿ.ಕುಮಾರ್, ಸಮಾಜದ ಮುಖಂಡರಾದ ಎನ್.ಸತ್ಯಪ್ಪ, ಭದ್ರಪ್ಪ, ಶೈವಾಗಮ ಪ್ರವೀಣ, ತಿಲಕೇಶವಮೂರ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕಿ ಶಾಂತಮ್ಮ ಇತರ ಗಣ್ಯರು ಉಪಸ್ಥಿತರಿದ್ದರು.

ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ನೂತನ ನಗರಸಭಾ ಸದಸ್ಯರಿಗೆ ಅಭಿನಂದಿಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News