ಸಾಂಸ್ಕೃತಿಕ ರಾಜಧಾನಿ ಮೈಸೂರು ವಿಶ್ವದ ಗಮನ ಸೆಳೆಯುವಂತಾಗಬೇಕು: ಸಚಿವ ಜಿ.ಟಿ.ದೇವೇಗೌಡ

Update: 2018-09-27 18:09 GMT

ಮೈಸೂರು,ಸೆ.27: ಪ್ರವಾಸೋದ್ಯಮ ಇಂದು ಲಾಭದಾಯಕ ಉದ್ಯಮವಾಗಿ ಜಗತ್ತನ್ನೇ ಬೆರಗುಗೊಳಿಸುವಂತೆ ಬೆಳೆಯುತ್ತಿದ್ದು, ಸಾಂಸ್ಕೃತಿಕ ರಾಜಧಾನಿ ಮೈಸೂರು ಕೂಡ ಪ್ರವಾಸೋದ್ಯಮ ತಾಣವಾಗಿದೆ. ಇದು ಇನ್ನೂ ಹೆಚ್ಚಿನ ರೀತಿಯಲ್ಲಿ ವಿಶ್ವದ ಗಮನ ಸೆಳೆಯುವಂತಾಗಬೇಕು ಎಂದು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಮನೆ ಮಂಡಳಿ,ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಮತ್ತು ಮೈಸೂರು ಹೋಟೆಲ್ ಅಸೋಸಿಯೇಷನ್ ವತಿಯಿಂದ ಮೈಸೂರು ಅರಮನೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ 'ವಿಶ್ವಪ್ರವಾಸೋದ್ಯಮ ದಿನ' ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವದ ಗಮನ ಸೆಳೆದಿದೆ. ದಸರಾಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಸಿದ್ಧತೆಗಳು ನಡೆಯುತ್ತಿವೆ. ವಿಶ್ವಪ್ರವಾಸೋದ್ಯಮದಲ್ಲಿ ವಿಶ್ವದ ಜನರನ್ನೆಲ್ಲ ಡಿಜಿಟಲ್ ವ್ಯವಸ್ಥೆಗಳ ಮೂಲಕ ಆಕರ್ಷಿಸಿ ಜನರೆಲ್ಲ ಬಂದು ನೋಡಿಹೋಗುವಂತೆ ಮಾಡಬೇಕು. ಇಲ್ಲಿನ ಸಂಗೀತ, ಕಲೆ, ಸಾಹಿತ್ಯ, ನಾಟಕ, ಜಾನಪದ, ಗ್ರಾಮೀಣ ಕಲೆಯನ್ನು ವಿದೇಶಿಗರು ಬಂದು ನೋಡಿ ಹೋಗಬೇಕು.  ಇಲ್ಲಿನ ಪ್ರವಾಸೋದ್ಯಮ ಕೇವಲ ದಸರಾಕ್ಕೆ ಮಾತ್ರ ಸೀಮಿತವಾಗಿರದೆ ವರ್ಷದ 365ದಿನಗಳೂ ಇರುವಂತೆ ವಿಫುಲವಾಗಿ ಬೆಳೆಯಬೇಕು ಎಂದರು. 

ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀನಂಜುಂಡೇಶ್ವರ ಸ್ವಾಮಿ, ಮಲೈ ಮಹದೇಶ್ವರ ಸ್ವಾಮಿ, ಮೇಲುಕೋಟೆ ಚಲುವನಾರಾಯಣ, ಬಿಳಿಗಿರಿರಂಗನಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ. ಹೀಗೆ ಪ್ರವಾಸೋದ್ಯಮ ಕ್ಷೇತ್ರಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಪ್ರವಾಸೋದ್ಯಮ ಹೆಚ್ಚು ಹೆಚ್ಚು ಬೆಳೆಯುವುದರಿಂದ ಸಣ್ಣಪುಟ್ಟ ವ್ಯಾಪಾರಸ್ಥರೂ ಕೂಡ ಆರ್ಥಿಕವಾಗಿ ಸಬಲರಾಗುತ್ತಾರೆ. ಅನೇಕ ಉದ್ಯೋಗಗಳೂ ಹುಟ್ಟಿಕೊಳ್ಳುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ರಾಯಭಾರಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವರ್ಚುಯಲ್ ರಿಯಾಲಿಟಿಗೆ ಚಾಲನೆ ನೀಡಿದರು. ಇದೇ ವೇಳೆ ಅರಮನೆ ವೀಕ್ಷಿಸಲು ಆಗಮಿಸಿದ ಪ್ರವಾಸಿಗರಿಗೆ ಹೂ ನೀಡಿ ಸ್ವಾಗತಿಸಲಾಯಿತು.

ಈ ಸಂದರ್ಭ ಶಾಸಕರುಗಳಾದ ಎಸ್.ಎ.ರಾಮದಾಸ್, ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪ್ರವಾಸೋದ್ಯಮ ಇಲಾಖೆಯ  ಉಪನಿರ್ದೇಶಕ ಹೆಚ್.ಪಿ ಜನಾರ್ಧನ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ, ಸೇಪ್ ವ್ಹೀಲ್ ಸಂಸ್ಥಾಪಕ ಪ್ರಶಾಂತ್,  ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News