ಶಿವಮೊಗ್ಗ-ಭದ್ರಾವತಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

Update: 2018-09-28 12:49 GMT

ಶಿವಮೊಗ್ಗ, ಸೆ. 28: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿಯ ಪರಿಣಾಮದಿಂದ ಜಿಲ್ಲೆಯಲ್ಲಿ ಮಳೆಯಾಗಲಾರಂಭಿಸಿದೆ. ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಲ್ಲಿ ಗುಡುಗು-ಮಿಂಚು ಸಹಿತ ಧಾರಾಕಾರ ವರ್ಷಧಾರೆಯಾಗಿದೆ. ಎರಡೂ ನಗರಗಳ ಹಲವೆಡೆ ಮರಗಳು ಉರುಳಿಬಿದ್ದು, ಜನ-ವಾಹನ ಸಂಚಾರಕ್ಕೆ ಅಡ್ಡಿಯಾದ ವರದಿಗಳು ಬಂದಿವೆ. 

ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗದಲ್ಲಿ ಅತ್ಯಧಿಕ 22.8 ಮಿಲಿ ಮೀಟರ್ (ಮಿ.ಮೀ.) ಮಳೆಯಾಗಿದೆ. ಉಳಿದಂತೆ ಭದ್ರಾವತಿಯಲ್ಲಿ 21.8 ಮಿ.ಮೀ., ತೀರ್ಥಹಳ್ಳಿಯಲ್ಲಿ 11.8 ಮಿ.ಮೀ., ಸಾಗರ 9.2 ಮಿ.ಮೀ., ಶಿಕಾರಿಪುರ 14.8 ಮಿ.ಮೀ., ಸೊರಬ 6.2 ಮಿ.ಮೀ., ಹೊಸನಗರ 4.4 ಮಿ.ಮೀ. ವರ್ಷಧಾರೆಯಾಗಿದೆ. 

ಅಬ್ಬರ: ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಲ್ಲಿ ಗುರುವಾರ ಸಂಜೆಯಿಂದಲೇ ಮಳೆಯಾಗಲಾರಂಭಿಸಿದೆ. ಶುಕ್ರವಾರ ಕೂಡ ಎರಡೂ ನಗರಗಳ ಹಲವೆಡೆ ಉತ್ತಮ ಮಳೆಯಾಯಿತು. ಧಾರಾಕಾರ ವರ್ಷಧಾರೆಯಿಂದ ರಸ್ತೆಗಳ ಮೇಲೆಯೇ ಮಳೆ ನೀರು ಹರಿಯಿತು. ಗುಂಡಿ-ಗೊಟರುಗಳಲ್ಲಿ ಮಳೆ ನೀರು ತುಂಬಿದ ಪರಿಣಾಮ, ವಾಹನ ಸವಾರರು ತೀವ್ರ ತೊಂದರೆ ಎದುರಿಸುವಂತಾಯಿತು. 

ಶಿವಮೊಗ್ಗ ನಗರದ ಆಲ್ಕೋಳದ ಬಳಿ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ಬೃಹದಾಕಾರದ ನೀಲಗಿರಿ ಮರವೊಂದು ಉರುಳಿಬಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಭದ್ರಾವತಿ ಪಟ್ಟಣದ ವಿಐಎಸ್‍ಎಲ್ ಪಾಲಿಟೆಕ್ನಿಕ್ ಬಳಿ ಮರ ಉರುಳಿಬಿದ್ದು, ಸುಮಾರು ಎರಡಕ್ಕೂ ಹೆಚ್ಚು ದ್ವಿ ಚಕ್ರ ವಾಹನಗಳು ಜಖಂಗೊಂಡಿರುವ ಮಾಹಿತಿಗಳು ಬಂದಿವೆ. 

ತಣ್ಣನೆ ವಾತಾವರಣ: ಶಿವಮೊಗ್ಗ ನಗರದಲ್ಲಿ ಕಳೆದ ಹಲವು ದಿನಗಳಿಂದ ಮಳೆ ಮಾಯವಾಗಿತ್ತು. ಬಿಸಿಲ ಬೇಗೆ ಹೆಚ್ಚಿತ್ತು. ತಾಪಮಾನದ ಪ್ರಮಾಣ 35 ಡಿಗ್ರಿ ಆಸುಪಾಸಿನಲ್ಲಿ ದಾಖಲಾಗುತ್ತಿತ್ತು. ಸುಡು ಬಿಸಿಲು ಅಕ್ಷರಶಃ ನಾಗರಿಕರ ನೆತ್ತಿ ಸುಡುತ್ತಿತ್ತು. ಕಳೆದೆರೆಡು ಎರಡ್ಮೂರು ದಿನಗಳಿಂದ ಬೀಳುತ್ತಿರುವ ಮಳೆಯಿಂದ ತಂಪನೆಯ ವಾತಾವರಣ ಮನೆ ಮಾಡಿದ್ದು, ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. 

ತೊಂದರೆ: ಪ್ರಸ್ತುತ ಬೀಳುತ್ತಿರುವ ಮಳೆಯು ಕೆಲ ರೈತರಿಗೆ ಅನುಕೂಲ ಕಲ್ಪಿಸಿದ್ದರೆ, ಮತ್ತೆ ಕೆಲ ರೈತರಿಗೆ ಅನಾನುಕೂಲವಾಗಿ ಪರಿಣಮಿಸಿದೆ. ಸೆಪ್ಟೆಂಬರ್ ತಿಂಗಳ ಮೊದಲ ವಾರದಿಂದಲೇ ಜಿಲ್ಲೆಯಾದ್ಯಂತ ಮುಂಗಾರು ಮಳೆ ಕಡಿಮೆಯಾಗಿ, ಬಿಸಿಲು ಬೀಳಲಾರಂಭಿಸಿತ್ತು. ಇದರಿಂದ ವಾತಾವರಣದಲ್ಲಿ ತೇವಾಂಡ ಕಡಿಮೆಯಾಗಿ, ಕೆಲ ಬೆಳೆಗಳು ಒಣಗಲಾರಂಭಿಸಿದ್ದವು. ಇದು ರೈತ ಸಮುದಾಯದಲ್ಲಿ ಆತಂಕ ಸೃಷ್ಟಿಸಿತ್ತು. 

ಇದೀಗ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ವಿಶೇಷವಾಗಿ ಬತ್ತ ಹಾಗೂ ತೋಟದ ಬೆಳೆಗಳಿಗೆ ಮಳೆ ಸಹಕಾರಿಯಾಗಿದೆ. ಮತ್ತೊಂದೆಡೆ ಈಗಾಗಲೇ ಕಟಾವಿಗೆ ಬಂದಿರುವ ಮೆಕ್ಕೆಜೋಳಕ್ಕೆ ತೊಂದರೆಯಾಗಿ ಪರಿಣಮಿಸಿದೆ. ಮಳೆಯಿಂದ ಕೊಯ್ಲಿಗೆ ಬಂದಿರುವ ಮೆಕ್ಕೆಜೋಳದ ತೆನೆಗಳು ನೆನೆಯುವಂತಾಗಿದೆ ಎಂದು ರೈತರು ಹೇಳುತ್ತಾರೆ. 

ವಿದ್ಯುತ್ ವ್ಯತ್ಯಯ
ಭದ್ರಾವತಿ ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಧಾರಾಕಾರ ವರ್ಷಧಾರೆಯಾಯಿತು. ಇದರಿಂದ ವಿವಿಧೆಡೆ ಮರ ಹಾಗೂ ಮರದ ರಂಬೆ-ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ, ಪಟ್ಟಣದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮೆಸ್ಕಾಂ ಸಿಬ್ಬಂದಿಗಳು, ವಿದ್ಯುತ್ ತಂತಿಗಳ ಮೇಲೆ ಬಿದ್ದ ಮರ ಹಾಗೂ ರಂಬೆಕೊಂಬೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತಲ್ಲೀನವಾಗಿದ್ದುದು ಕಂಡುಬಂದಿತು. 

ಸಿಡಿಲ ಅಬ್ಬರ
ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ಗುಡುಗು-ಮಿಂಚಿನ ಆರ್ಭಟ ಜೋರಾಗಿದೆ. ಭದ್ರಾವತಿಯಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ಗುಡುಗು ಸಹಿತ ಬಿದ್ದ ಮಳೆಯು, ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿತ್ತು. ಹಾಗೆಯೇ ಸಿಡಿಲಿನ ಆರ್ಭಟವು ನಾಗರಿಕರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News