×
Ad

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ ಮೇಲೆ ಉರುಳಿಬಿದ್ದ ಬೃಹದಾಕಾರದ ನೀಲಗಿರಿ ಮರ; ತಪ್ಪಿದ ಭಾರೀ ದುರಂತ

Update: 2018-09-28 18:22 IST

ಶಿವಮೊಗ್ಗ, ಸೆ. 28: ನಗರದ ಹೊರವಲಯ ಆಲ್ಕೋಳದ ಬಳಿ ಶುಕ್ರವಾರ ಮಧ್ಯಾಹ್ನ ಬೃಹದಾಕಾರದ ನೀಲಗಿರಿ ಮರವೊಂದು ಬೇರು ಸಮೇತ ರಾಷ್ಟ್ರೀಯ ಹೆದ್ದಾರಿ 206 ರ ಮೇಲೆ ಉರುಳಿಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಪವಾಡಸದೃಶ್ಯ ರೀತಿಯಲ್ಲಿ ವಾಹನ ಸವಾರರು ಅಪಾಯದಿಂದ ಪಾರಾಗಿದ್ದಾರೆ.

ನೀಲಗಿರಿ ಮರವು ನಿಂತಿದ್ದ ಟ್ರ್ಯಾಕ್ಟರೊಂದರ ಮೇಲೆ ಉರುಳಿ ಬಿದ್ದಿದೆ. ಈ ವೇಳೆ ಟ್ರ್ಯಾಕ್ಟರ್ ಚಾಲಕ ಹಾಗೂ ಅದರಲ್ಲಿ ಆಗಮಿಸಿದ್ದ ಕೂಲಿಕಾರ್ಮಿಕರು ರಸ್ತೆ ಬದಿ ಟ್ರ್ಯಾಕ್ಟರ್ ನಿಲ್ಲಿಸಿ, ಸಮೀಪದ ಹೋಟೆಲ್‍ವೊಂದರಲ್ಲಿ ಊಟಕ್ಕೆ ತೆರಳಿದ್ದರಿಂದ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. 

ರಸ್ತೆಗೆ ಅಡ್ಡಲಾಗಿ ನೀಲಗಿರಿ ಮರ ಬಿದ್ದಿದ್ದರಿಂದ ಶಿವಮೊಗ್ಗ - ಸಾಗರ ನಡುವೆ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ, ಮರವನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಾರಣವೇನು?: ಆಲ್ಕೋಳ ವೃತ್ತದಿಂದ ಬಸ್ ನಿಲ್ದಾಣದ ಅಶೋಕ ವೃತ್ತದವರೆಗಿನ ರಾಷ್ಟ್ರೀಯ ಹೆದ್ದಾರಿಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ದಿಗೊಳಿಸಲಾಗುತ್ತಿದೆ. ಇದಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ಇತ್ತೀಚೆಗೆ ಜೆಸಿಬಿಯ ಮೂಲಕ ಗುಂಡಿ ತೆಗೆಯಲಾಗಿತ್ತು. ಅದರಂತೆ ಆಲ್ಕೋಳ ವೃತ್ತ ಸಮೀಪದ ರಸ್ತೆಯ ಇಕ್ಕೆಲಗಳಲ್ಲಿಯೂ ಗುಂಡಿ ತೆರೆಯಲಾಗಿತ್ತು. 

ಆದರೆ ಮರಗಳ ಬುಡದ ಬಳಿಯೇ ಅವೈಜ್ಞಾನಿಕವಾಗಿ ಗುಂಡಿಗಳನ್ನು ತೆರೆಯಲಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಮರದ ಬೇರುಗಳು ಸಡಿಲಗೊಂಡಿವೆ. ಈ ಕಾರಣದಿಂದಲೇ ಮಧ್ಯಾಹ್ನ ಬೃಹದಾಕಾರದ ನೀಲಗಿರಿ ಮರವೊಂದು ಉರುಳಿ ಬಿದ್ದಿದೆ ಎಂದು ಸ್ಥಳೀಯರು ದೂರಿದ್ದಾರೆ. 

ಇನ್ನೂ ಕೆಲ ಮರದ ಬೇರುಗಳು ಸಡಿಲಗೊಂಡಿದೆ. ಇದೇ ರೀತಿ ಮಳೆ ಮುಂದುವರಿದರೇ ಯಾವ ಸಮಯದಲ್ಲಿ ಬೇಕಾದರೂ ರಸ್ತೆಯ ಮೇಲೆ ಮರಗಳು ಉರುಳಿ ಬೀಳಬಹುದಾಗಿದೆ. ಈ ರಸ್ತೆಯಲ್ಲಿ ಜನ-ವಾಹನ ಸಂಚಾರ ಹೆಚ್ಚಿದ್ದು, ಸ್ವಲ್ಪ ಹೆಚ್ಚು ಕಡಿಮೆಯಾದರೂ ಭಾರೀ ಪ್ರಮಾಣದ ಸಾವು-ನೋವು ಸಂಭವಿಸುವುದು ನಿಶ್ಚಿತವಾಗಿದೆ. ಶುಕ್ರವಾರ ಮಧ್ಯಾಹ್ನ ಮರ ಬಿದ್ದ ವೇಳೆಯೂ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿತ್ತು. ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಹಾನಿಯಾಗಿಲ್ಲವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News