ರಾಜ್ಯ ಸರಕಾರದಲ್ಲಿನ ಗೊಂದಲಗಳಿಗೆ ಫುಲ್‍ಸ್ಟಾಪ್ ಹಾಕಿದ್ದೇನೆ: ಎಚ್‍ಡಿ ದೇವೇಗೌಡ
ಚಿಕ್ಕಮಗಳೂರು, ಸೆ.28: ಪ್ರಸಕ್ತ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ವಿದ್ಯಮಾನಗಳಿಗೆ ಫುಲ್‍ಸ್ಟಾಪ್ ಹಾಕಿದ್ದೇನೆ. ಅದಕ್ಕೆ ವಿರೋಧ ಪಕ್ಷದವರು, ಕಾಂಗ್ರೆಸ್ ಸ್ನೇಹಿತರು ಬೇರೆ ಬೇರೆ ರೀತಿ ಮಾತನಾಡುತ್ತಿದ್ದಾರೆ. ಅದಕ್ಕೆಲ್ಲ ನಾನು ಪ್ರತಿಕ್ರೀಯೆ ನೀಡುವುದಿಲ್ಲ, ಬಹುಶಃ ಎಲ್ಲಾ ಗೊಂದಲಗಳು ಅಂತ್ಯವಾಗುತ್ತೆ ಎಂಬ ನಂಬಿಕೆ ಇದೆ. ಇನ್ನೊಂದು ತಿಂಗಳಲ್ಲಿ ಎಲ್ಲಾ ಗೊಂದಲಗಳು ಬಗೆಹರಿಯಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾಗರರೊಂದಿಗೆ ಮಾತನಾಡಿದ ಅವರು, ಈಗ ಎದ್ದಿರುವ ಗೊಂದಲಗಳು ಮುಂಬರುವ ಲೋಕಸಭಾ ಚುನಾವಣೆ ವೇಳೆ ಬಗೆಹರಿಯಲಿವೆ. ಸಂಸತ್ ಚುನಾವಣೆ ವೇಳೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶದಿಂದಲಾದರೂ ಎಲ್ಲ ಗೊಂದಲಗಳು ಅಂತ್ಯವಾಗಲಿವೆ ಎಂದು ತಿಳಿಸಿದರು.
ಮೈತ್ರಿ ಸರಕಾರದಲ್ಲಿ ಯಾವುದೇ ಒಡಕು ಬಾರದಂತೆ ನೋಡಿಕೊಳ್ಳುತ್ತೀದ್ದೇವೆ. ಇದರಲ್ಲಿ ಎರಡು ಪಕ್ಷಗಳ ಜವಾಬ್ದಾರಿಯೂ ಹೆಚ್ಚಿದೆ. ಆ ಜವಾಬ್ದಾರಿ ಅರಿತು ನಡೆದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದ ಅವರು, ಬಿಬಿಎಂಪಿ ಮೈತ್ರಿ ಕುರಿತು ಪ್ರತಿಕ್ರಿಯಿಸಿ, ನಾಳೆಯೇ ಮೈತ್ರಿ ಮುರಿದು ಬೀಳುತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದಕ್ಕೆ ಅವಕಾಶ ನೀಡುವುದಿಲ್ಲ, ಈ ಬಗ್ಗೆ ಹೆಚ್ಚಿನ ಚರ್ಚೆ ಮಾಡುವುದಿಲ್ಲ. ಬಿಬಿಎಂಪಿ ಮೈತ್ರಿ ವಿಚಾರದಲ್ಲಿ ನಾನು ಭಾಗಿಯಾಗಿಲ್ಲ, ಸಿದ್ದರಾಮಯ್ಯ ಸಹ ಸರಕಾರಕ್ಕೆ ಅಪಾಯ ಆಗುವುದಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕೂಡ ಅದೇ ರೀತಿ ಹೇಳಿದ್ದಾರೆ. ಮೈತ್ರಿ ಸರಕಾರದಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ಹಂತ ಹಂತವಾಗಿ ಬಗೆಹರಿಯುತ್ತವೆ ಎಂಬ ಭರವಸೆ ವ್ಯಕ್ತಪಡಿಸಿದ ಅವರು, ಬಿಜೆಪಿ ರೆಸಾರ್ಟ್ ರಾಜಕಾರಣದ ಕುರಿತು ಸುದ್ದಿಗಾರರು ಪ್ರಶ್ನಿಸುತ್ತಿದ್ದಂತೆ ಕೈ ಮುಗಿದು ಬೇಸರ ವ್ಯಕ್ತಪಡಿಸಿದರು.
ಸುಪ್ರೀಂ ತೀರ್ಪು ಸ್ವಾಗತ:
ಶಬರಿಮಲೆ ದೇವಾಲಯಕ್ಕೆ ಮಹಿಳೆಯ ಪ್ರದೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಇಷ್ಟ ಇದ್ದವರು ದೇವಾಲಯಕ್ಕೆ ಹೋಗುತ್ತಾರೆ, ಇಷ್ಟ ಇಲ್ಲದವರು ಹೋಗುವುದಿಲ್ಲ. ಲಿಂಗ ತಾರತಮ್ಯ ಮಾಡಬಾರದು ಎಂದು ಸುಪ್ರೀಂಕೋರ್ಟ್ ಇಂತಹ ಆದೇಶ ನೀಡಿದೆ. ನಾನು ತೀರ್ಪನ್ನು ಸ್ವಾಗತಿಸುತ್ತೇನೆ ಎಂದರು.