ಅತಿವೃಷ್ಟಿ, ಅನಾವೃಷ್ಟಿ ಹಾನಿ ಬಗ್ಗೆ ಸಮ್ಮಿಶ್ರ ಸರಕಾರ ನಿರ್ಲಕ್ಷ್ಯ: ಶೋಭಾ ಕರಂದ್ಲಾಜೆ ಆರೋಪ

Update: 2018-09-28 13:35 GMT

ಚಿಕ್ಕಮಗಳೂರು, ಸೆ.28: ರಾಜ್ಯ ಸಮ್ಮಿಶ್ರ ಸರಕಾರವು ಪ್ರತಿನಿತ್ಯ ಒಳಜಗಳ, ಸಂಪುಟ ವಿಸ್ತರಣೆ, ಆಂತರಿಕ ಗುದ್ದಾಟದಲ್ಲಿಯೇ ಕಾಲಹರಣ ಮಾಡುತ್ತಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ಹಾನಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. 

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಆಂತರಿಕ ಜಗಳದಿಂದ ಅಭಿವೃದ್ಧಿ ಕೆಲಸಗಳು ಸಂಪೂರ್ಣವಾಗಿ ಕುಂಠಿತವಾಗಿದೆ ಎಂದು ಆರೋಪಿಸಿದ ಅವರು, ಇತ್ತೀಚೆಗೆ ಸುರಿದ ಬಾರೀ ಮಳೆಯಿಂದ ಮಲೆನಾಡು ಭಾಗದಲ್ಲಿ ಅಡಿಕೆ, ಕಾಫಿ, ಕಾಳುಮೆಣಸು ಸಂಪೂರ್ಣ ನಾಶವಾಗಿದೆ. ಮತ್ತೊಂದು ಕಡೆ ರಾಜ್ಯದ ಕೆಲ ಭಾಗದಲ್ಲಿ ಭೀಕರ ಬರಗಾಲವಿದೆ. ರಾಜ್ಯ ಸರ್ಕಾರ ಮಾತ್ರ ಯಾವುದಕ್ಕೂ ಸ್ಪಂದನೆ ನೀಡುತ್ತಿಲ್ಲ. ಮಳೆಹಾನಿಯ ವರದಿಯನ್ನು ಇನ್ನೂ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಲ್ಲ ಎಂದು ದೂರಿದ ಅವರು, ಹಾನಿ ಕುರಿತ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಇಷ್ಟರೊಳಗೆ ಕಳಿಸಬೇಕಿತ್ತು. ಪೂರ್ಣ ಪ್ರಮಾಣದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳಿಸಿಲ್ಲ, ಮುಖ್ಯಮಂತ್ರಿಗಳು ವರದಿ ನೀಡುವಂತೆ ಅಧಿಕಾರಿಗಳಿಗೆ ಹೇಳಿದ್ದಾರೆಯೇ ಹೊರತು ಅದು ಏನಾಯಿತು ಎಂದು ಗೊತ್ತಿಲ್ಲ. ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ ಸರಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಸ್ಥಿರ ಸರ್ಕಾರವನ್ನು ರಕ್ಷಣೆ ಮಾಡುವುದು ಹಾಗೂ ಟೆಂಪಲ್ ರನ್ ಬಿಟ್ಟರೇ ಬೇರೇನು ಮಾಡಿಲ್ಲ. ಈ ಸರ್ಕಾರದ ಮೇಲಿದ್ದ ಜನರ ನಂಬಿಕೆ ಹುಸಿಯಾಗಿದೆ ಎಂದು ತಿಳಿಸಿದರು.

ಕಾಳುಮೆಣಸಿನ ವಿಚಾರವಾಗಿ ಕೇರಳದ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಅವರಿಗೆ ನ್ಯಾಯ ಸಿಕ್ಕಿದೆ. ನಾವು ಕೇಂದ್ರ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೆ ಬೇರೆ ದೇಶದಿಂದ ಭಾರತಕ್ಕೆ ಮೆಣಸು ಆಮದಾಗಬಾರದು ಎಂದು ಮತ್ತೊಮ್ಮೆ ಒತ್ತಾಯ ಮಾಡುತ್ತೇವೆ ಎಂದ ಅವರು, ಅತಿಯಾದ ಮಳೆಯಿಂದ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯಲ್ಲಿ ಶೇ. 40ರಷ್ಟು ಕಾಫಿ ಬೆಳೆ ಹಾನಿಯಾಗಿದೆ ಎಂದು ಕಾಫಿ ಮಂಡಳಿ ವರದಿ ನೀಡಿದೆ. ಇದರ ಬಗ್ಗೆ ಸಂಸತ್ ಅದಿವೇಶನದಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News