ಸಂಸದ ಪ್ರತಾಪ್ ಸಿಂಹ ವಿರುದ್ಧ ತಿರುಗಿಬಿದ್ದ ಒಕ್ಕಲಿಗ ಬಿಜೆಪಿ ಮುಖಂಡರು ?

Update: 2018-09-28 15:27 GMT

ಮೈಸೂರು,ಸೆ.28: ಕಳೆದ ವಿಧಾನಸಭಾ ಹಾಗೂ ಪಾಲಿಕೆ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ತಂತ್ರ ರೂಪಿಸಿ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿದ್ದು, ಈ ಹಿನ್ನೆಲೆಯಲ್ಲಿ ಹಾಲಿ ಸಂಸದರ ವಿರುದ್ಧವೇ ಒಕ್ಕಲಿಗ ಬಿಜೆಪಿ ಮುಖಂಡರು ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ.

ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಹಾಲಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಸ್ವಜಾತಿ ಮುಖಂಡರು ರಹಸ್ಯ ಸಭೆ ನಡೆಸಿದ್ದಾರೆ. ಮೈಸೂರಿನ ಸಂಸದರ ಕಚೇರಿ ಬಳಿಯೇ ಹಾಲಿ ಸಂಸದರ ವಿರುದ್ಧ ರಣತಂತ್ರ ರೂಪಿಸಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಪ್ರತಾಪ್ ಸಿಂಹ ಅವರನ್ನು ಬದಲಾಯಿಸಬೇಕೋ ಬೇಡವೋ ಎಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಒಕ್ಕಲಿಗ ಸಮುದಾಯದ ಮತ್ತೋರ್ವ ನಾಯಕನಿಗೆ ಅವಕಾಶ ನೀಡುವಂತೆ ಬಿಜೆಪಿ ಒಕ್ಕಲಿಗ ಮುಖಂಡರು ಸಭೆ ನಡೆಸಿದ್ದಾರೆ. ಪ್ರತಾಪ್ ಸಿಂಹ ಒಕ್ಕಲಿಗರು ಹೊಲಸು ಮಾತನಾಡುವವರು ಎಂದು ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ್ದರು. ಈ ಕುರಿತು ಈವರೆಗೂ ಕ್ಷಮೆ ಕೇಳಿಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆಸಿದ್ದು, ಈ ಮಾತು ಮುಂದಿನ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಬದಲಾವಣೆ ಮಾಡಬೇಕೋ ಬೇಡವೋ ಎಂಬ ಕುರಿತು ರಹಸ್ಯ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಸಂಸದರ ನಡವಳಿಕೆಯಿಂದ ಬೇಸತ್ತು ಸಭೆ ಆಯೋಜಿಸಿದ್ದು, ಸಭೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಜ್ ಕುಮಾರ್, ಬಜರಂಗದಳದ ಕುಮಾರ್ ಗೌಡ, ಚಾಮರಾಜ ಕ್ಷೇತ್ರದ ಬಿಜೆಪಿ ಮುಖಂಡ ಶ್ರೀರಾಂ, ಕೆಆರ್ ಕ್ಷೇತ್ರದ ಜಯಂತ್, ಚಾಮುಂಡೇಶ್ವರಿ ಕ್ಷೇತ್ರ ಬಿಜೆಪಿ ಮುಖಂಡ ಅರುಣ್ ಕುಮಾರ್ ಗೌಡ, ಫೈಲ್ವಾನ್ ರವಿ, ಯೋಗಣ್ಣ, ಬಿಜೆಪಿ ನಗರ ಉಪಾಧ್ಯಕ್ಷ ಬೂ ಉಮೇಶ್, ನಜರ್ ಬಾದ್ ಫೈಲ್ವಾನ್ ಪರಮೇಶ್, ಒಂಟಿಕೊಪ್ಪಲ್ ಪ್ರೇಮ್, ನಜರ್ ಬಾದ್ ಚರಣ್, ಕೇಬಲ್ ವೆಂಕಟೇಶ್, ಲೋಕೇಶ್  ಕುಮಾರ್ ಸೇರಿದಂತೆ 50 ಕ್ಕೂ ಹೆಚ್ಚು ಮುಖಂಡರು ಹಾಜರಿದ್ದರು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News