ದಲಿತರ ಸಂವಿಧಾನಿಕ ಹಕ್ಕುಗಳ ಉಳಿವಿಗೆ ತೀವ್ರ ಹೋರಾಟ ಅಗತ್ಯ: ಮಾವಳ್ಳಿ ಶಂಕರ್
ಚಿಕ್ಕಮಗಳೂರು ಸೆ.28 ದಲಿತರು ಪ್ರಸ್ತುತ ಪಡೆದುಕೊಳ್ಳುತ್ತಿರುವ ಮೀಸಲಾತಿ ಸೇರಿದಂತೆ ಸಂವಿಧಾನದತ್ತ ಹಕ್ಕು, ಸವಲತ್ತು ಮತ್ತು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕಾದರೆ ಆ ವರ್ಗದ ಜನ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳನ್ನು ತೀವ್ರಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಸಲಹೆ ಮಾಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ನಗರದ ಸ್ತ್ರೀಶಕ್ತಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂನಾ ಒಪ್ಪಂದ ವಿಷಯ ಕುರಿತ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳು ಇಂದು ಮೂಲೆಗುಂಪಾಗುತ್ತಿವೆ, ಇಂದಿನ ಕೇಂದ್ರ ಸರ್ಕಾರ ಮೇಲ್ವರ್ಗದವರು ಮತ್ತು ಉದ್ಯಮಿಗಳ ಪರವಾಗಿದೆ. ಭೂಮಿ ಸೇರಿದಂತೆ ಎಲ್ಲಾ ಸಂಪನ್ಮೂಲಗಳನ್ನೂ ಅವರಿಗೇ ನೀಡುತ್ತಿದೆ. ಮನುವಾದವನ್ನು ಮತ್ತೆ ಹೇರಲು ಹೊರಟಿರುವ ಕೇಂದ್ರ ಸರ್ಕಾರ ಅಂಬೇಡ್ಕರ್ ಅವರ ಸಂವಿಧಾನವನ್ನೇ ಕೈಬಿಡುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಇಂದು ದೇಶಾದ್ಯಂತ ದಲಿತರ ಮೇಲೆ ದೌರ್ಜನ್ಯ, ಆ ವರ್ಗದ ಮಹಿಳೆಯರ ಮೇಲೆ ಅತ್ಯಾಚಾರ, ಕಗ್ಗೊಲೆ ನಿರಂತರವಾಗಿ ನಡೆಯುತ್ತಿವೆ, ವರ್ಷದಿಂದ ವರ್ಷಕ್ಕೆ ದೌರ್ಜನ್ಯ ಹೆಚ್ಚಾಗುತ್ತಿದೆ, ಅಸಮಾನತೆ ಮತ್ತು ತಾರತಮ್ಯದ ಬಗ್ಗೆ ಮಾತನಾಡುವವರನ್ನು ಜೈಲಿಗೆ ಅಟ್ಟಲಾಗುತ್ತಿದೆ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ, ವಿಚಾರವಾದಿಗಳ ಹತ್ಯೆ ನಡೆಯುತ್ತಿದೆ, ಮನುವಾದ ರಾಷ್ಟ್ರದಲ್ಲಿ ಮತ್ತೆ ಭುಗಿಲೇಳುತ್ತಿದೆ ಎಂದು ದೂರಿದರು. ದಲಿತ ವರ್ಗ ಈಗಲಾದರೂ ಎಚ್ಚೆತ್ತು ರಾಜಕೀಯ ಮತ್ತು ಸಾಮಾಜಿಕ ಹೋರಾಟವನ್ನು ತೀವ್ರಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಆ ಸಮುದಾಯದವರ ಸ್ಥಿತಿ ಘೋರವಾಗುತ್ತದೆ ಎಂದು ಎಚ್ಚರಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಹೆಚ್.ಎಂ.ರುದ್ರಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರ ಕಾಲದಿಂದ ಹಿಡಿದು ಇದುವರೆಗೂ ದಲಿತರ ಪರ ನಡೆದಿರುವ ಹೋರಾಟಗಳ ಚರಿತ್ರೆಯನ್ನು ಆ ವರ್ಗದ ಜನ ಅರಿತುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಪೂನಾ ಒಪ್ಪಂದದ ಕುರಿತು ದಲಿತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿಯ ಸದಸ್ಯ ಮುನಿಕೃಷ್ಣಪ್ಪ, ಮುಖಂಡರಾದ ಬೀಸನಹಳ್ಳಿ ಮೂರ್ತಿ, ಮಲ್ಲೇಶ್ ಅಂಬುಗ ಎಲ್ ಚಂದ್ರು ಬಿ.ಕೆ.ವಸಂತಕುಮಾರ್, ಲಕ್ಷ್ಮಣ್, ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ, ಕೆ.ಪಿ.ರಾಜರತ್ನಂ, ಪಿ.ವೇಲಾಯುಧನ್, ಪರಮೇಶ್, ರೈತ ಸಂಘದ ಮುಖಂಡರಾದ ಆರ್.ಆರ್.ಮಹೇಶ್, ಗುರುಶಾಂತಪ್ಪ, ಸಿಪಿಐ ಮುಖಂಡ ಬಿ.ಅಮ್ಜದ್ ಉಪಸ್ಥಿತರಿದ್ದರು.