×
Ad

​ಸಂಪುಟ ವಿಸ್ತರಣೆ ಬೆನ್ನಲ್ಲೆ ಖಾತೆಗಳ ಬದಲಾವಣೆ ಸಾಧ್ಯತೆ?

Update: 2018-09-29 18:33 IST

ಬೆಂಗಳೂರು, ಸೆ. 29: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ ಸರಕಾರದ ಸಚಿವ ಸಂಪುಟ ಅಕ್ಟೋಬರ್ 10ರೊಳಗೆ ವಿಸ್ತರಣೆಯಾಗುವುದು ನಿಶ್ಚಿತವಾಗಿದ್ದು, ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಕೆಲ ‘ಖಾತೆ’ಗಳ ಬದಲಾವಣೆ ಸಾಧ್ಯತೆಗಳಿವೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಡಾ.ಸುಧಾಕರ್, ಸಿ.ಎಸ್.ಶಿವಳ್ಳಿ, ಬಿ.ಸಿ.ಪಾಟೀಲ್ ಸೇರಿದಂತೆ ಹಲವು ಮಂದಿ ಆಕಾಂಕ್ಷಿಗಳಿದ್ದು, ಆ ಪೈಕಿ 6 ಮಂದಿ ಕಾಂಗ್ರೆಸ್‌ನಿಂದ ನೂತನವಾಗಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದೆ. ವಿಸ್ತರಣೆ ಬೆನ್ನಲ್ಲೆ ಪ್ರಮುಖ ಖಾತೆಗಳಿಗಾಗಿ ಕೆಲವರ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಕೆಲ ಪ್ರಭಾವಿಗಳ ಖಾತೆಯಲ್ಲೂ ಅದಲು ಬದಲಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಪಾಲಿನ ಖಾತೆಗಳಲ್ಲಿ ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ, ಬೃಹತ್ ಕೈಗಾರಿಕೆ ಹಾಗೂ ಕಂದಾಯ, ಗೃಹ ಖಾತೆ ಸೇರಿದಂತೆ ಅದಲು-ಬದಲು ಆಗಲಿವೆ. ಸಂಪುಟ ಸೇರುವ ನಿರೀಕ್ಷೆಯಲ್ಲಿರುವ ರಾಮಲಿಂಗಾರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಲು ಹೆಚ್ಚಿನ ಆಸಕ್ತಿ ಹೊಂದಿದ್ದಾರೆಂದು ತಿಳಿದು ಬಂದಿದೆ.

ಈ ಮಧ್ಯೆ ಜಲಸಂಪನ್ಮೂಲ ಖಾತೆ ಮತ್ತೆ ಉತ್ತರ ಕರ್ನಾಟಕದ ಪಾಲಾಗುವ ಸಾಧ್ಯತೆಗಳಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಹೊಣೆಗಾರಿಕೆ ಆರ್.ವಿ. ದೇಶಪಾಂಡೆ ಕೈವಶವಾಗಲಿದ್ದು, ಕಂದಾಯ ಖಾತೆ ಡಾ.ಜಿ.ಪರಮೇಶ್ವರ್ ಹೆಗಲಿಗೆ ಹೋಗಲಿದೆ ಎಂದು ಹೇಳಲಾಗಿದೆ.

ಗೃಹ ಖಾತೆ ಯಾರಿಗೆ ಕೊಡಲಿದ್ದಾರೆಂಬುದು ಇನ್ನೂ ಖಾತ್ರಿಯಾಗಿಲ್ಲ. ಈ ನಡುವೆ ಕೆ.ಜೆ.ಜಾರ್ಜ್ ಮತ್ತು ರಾಮಲಿಂಗಾರೆಡ್ಡಿಯವರಿಗೆ ಗೃಹ ಖಾತೆ ಹೊಣೆಗಾರಿಕೆ ನೀಡುವ ಸಾಧ್ಯತೆಗಳಿವೆ. ಆದರೆ, ಜಾರ್ಜ್, ಪರಮೇಶ್ವರ್, ರಾಮಲಿಂಗಾರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪೈಪೋಟಿ ನಡೆಸಿದ್ದಾರೆಂದು ತಿಳಿದು ಬಂದಿದೆ.

ವರಿಷ್ಠರಿಗೆ ತೀವ್ರ ತಲೆ ನೋವಾಗಿದ್ದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಪ್ರಮುಖ ಖಾತೆಗಳಿಗಾಗಿ ಮುಖಂಡರ ನಡುವೆ ಜಂಗಿಕುಸ್ತಿ ನಡೆಯುವ ಸಾಧ್ಯತೆಗಳಿದ್ದು, ಸಂಪುಟ ವಿಸ್ತರಣೆ ಹಾಗೂ ಖಾತೆ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ‘ಸೂತ್ರ’ದತ್ತಲೇ ಎಲ್ಲರ ಚಿತ್ತ ನೆಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News