ಇವಿಎಂ ದುರ್ಬಳಕೆ ಆರೋಪ: ಶಾಸಕರಾದ ರಾಮದಾಸ್, ಎಲ್.ನಾಗೇಂದ್ರರಿಗೆ ನೋಟಿಸ್ ಜಾರಿ

Update: 2018-09-29 13:54 GMT

ಮೈಸೂರು,ಸೆ.29: ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆಯಿಂದ ಸೋಲುಂಟಾಗಿದೆ ಎಂದು ಆರೋಪಿಸಿ ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ಮತ್ತು ಚಾಮರಾಜ ಕ್ಷೇತ್ರದ ಪರಾಜಿತ ಅಭ್ಯರ್ಥಿ ವಾಸು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ಎಸ್.ಎ.ರಾಮದಾಸ್ ಮತ್ತು ಎಲ್ ನಾಗೇಂದ್ರ ಅವರಿಗೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.

ನಿನ್ನೆ ಹೈಕೋರ್ಟ್ ನೋಟೀಸ್ ಜಾರಿ ಮಾಡಿದ್ದು, ನ.2ಕ್ಕೆ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಿದೆ. ಮೇ.12ರಂದು ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಿಂದ ನಮಗೆ ಸೋಲಾಗಿದೆ. ಆದ್ದರಿಂದ ಈ ಕುರಿತು ತನಿಖೆಗೆ ನಿರ್ದೇಶಿಸಬೇಕೆಂದು ನಾಲ್ವರು ಪರಾಜಿತ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇವಿಎಂ ಹ್ಯಾಕ್ ಮಾಡಿದ್ದರಿಂದ ನಮಗೆ ಸೋಲಾಯಿತು, ಪ್ರತಿಸ್ಪರ್ಧಿಗಳ ಆಯ್ಕೆಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎನ್.ರವೀಂದ್ರನಾಥ್ ಕಾಮತ್ ವಕಾಲತ್ತು ವಹಿಸಿದ್ದಾರೆ ಎನ್ನಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News