×
Ad

ಬೆಳೆ ಹಾನಿ ಪರಿಹಾರ : ತ್ವರಿತವಾಗಿ ರೈತರಿಗೆ ವಿತರಿಸಲು ಉಸ್ತುವಾರಿ ಕಾರ್ಯದರ್ಶಿ ಅನ್ಬು ಕುಮಾರ್ ಸೂಚನೆ

Update: 2018-09-29 23:39 IST

ಮಡಿಕೇರಿ, ಸೆ.29 :ಅತಿವೃಷ್ಟಿಯಿಂದ ಬೆಳೆಹಾನಿಗೆ ತುತ್ತಾದ ರೈತರಿಗೆ ತ್ವರಿತವಾಗಿ ಬೆಳೆಹಾನಿ ಪರಿಹಾರ ವಿತರಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬು ಕುಮಾರ್ ಅವರು ನಿರ್ದೇಶನ ನೀಡಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೊಡಗು ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಅರಣ್ಯ ಹಕ್ಕು ಕಾಯ್ದೆಯಲ್ಲಿ ಆರ್‍ಟಿಸಿಯಲ್ಲಿ  ಹೆಸರು ನಮೂದಾಗಿರುವ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳುವಂತೆ ಮೂರು ತಾಲ್ಲೂಕುಗಳ ತಹಶೀಲ್ದಾರರಿಗೆ ಸೂಚನೆ ನೀಡಿದರು. 

ಅತಿವಷ್ಟಿಯಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ಸರ್ಕಾರದಿಂದ ನೀಡುತ್ತಿರುವ ಪಡಿತರ ಸಾಮಾಗ್ರಿಗಳ ವಿತರಣೆಯಲ್ಲಿ ವಿಳಂಬವಾಗಬಾರದು. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಪಡಿತರ ವಿತರಣೆಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.   

ಅತಿವೃಷ್ಟಿಯಿಂದ ತೊಂದರೆಗೆ ಒಳಗಾದ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಸಕಲ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.   

ಪರಿಹಾರ ಕೇಂದ್ರದಲ್ಲಿ ಇರುವಂತಹ ನಿರಾಶ್ರಿತರಿಗೆ ಉಚಿತ ಬಸ್‍ಪಾಸ್‍ಗಳನ್ನು ಈಗಾಗಲೇ ವಿತರಿಸಿದ್ದು, ಕುಶಾಲನಗರ ಪರಿಹಾರ ಕೇಂದ್ರದಲ್ಲಿ 81 ಜನರಿಗೆ ಹಾಗೂ ಸಂಪಾಜೆ ಪರಿಹಾರ ಕೇಂದ್ರದಲ್ಲಿ 48 ಜನರಿಗೆ ಬಸ್‍ಪಾಸ್ ವಿತರಿಸಿರುವುದಾಗಿ ಕೆಎಸ್‍ಆರ್‍ಟಿಸಿ ವಿಭಾಗೀಯ ವ್ಯವಸ್ಥಾಪಕರು ಸಭೆಗೆ ಮಾಹಿತಿ ನೀಡಿದರು.       

ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ರಸ್ತೆ ದುರಸ್ತಿ ಸಂಬಂಧ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು ಕಾಮಗಾರಿ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಬಾಕಿ ಉಳಿದಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ನಿರ್ದೇಶನ ನೀಡಿದರು.  

ಮಾಂದಲ್‍ಪಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತ್ವರಿತವಾಗಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತಾಕೀತು ಮಾಡಿದರು. 

ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡುವ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಈಗಾಗಲೇ ನಿರ್ಮಾಣ ಆಗಿರುವ ಮಾದರಿ ಮನೆಗಳನ್ನು ನಿರಾಶ್ರಿತರು ವೀಕ್ಷಣೆ ಮಾಡಿ, ಅವರಿಗಿಷ್ಟದ ಮನೆ ಮಾದರಿಯನ್ನು ಆಯ್ಕೆ ಮಾಡಿಕೊಂಡ ನಂತರ ಮನೆ ನಿರ್ಮಾಣ ಕಾರ್ಯ ಪ್ರಾರಂಭಗೊಳಿಸುವಂತೆ ಸೂಚನೆ ನೀಡಿದರು.

ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆಯ ಪ್ರಗತಿ ಕುರಿತು ಅಸಮಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಗೆ ಜೀವನಾಡಿ ಇದ್ದಂತೆ. ಅವುಗಳ ಕಾಮಗಾರಿಗಳನ್ನು ತುರ್ತಾಗಿ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರಿವಿದ್ಯಾ ಅವರು ಅತಿವೃಷ್ಟಿಯಿಂದ ಹಾನಿಗೊಳಗಾದ ಆಸ್ತಿ, ಬೆಳೆನಾಶ ಮನೆ ಕಳೆದುಕೊಂಡವರ ನಷ್ಟದ ಕುರಿತು ಸಭೆಗೆ ಮಾಹಿತಿ ನೀಡಿ, ಈಗಾಗಲೇ ಮನೆ ಕಳೆದುಕೊಂಡ ನಿರಾಶ್ರಿತರಿಗೆ ವಿತರಿಸಿರುವ ಪರಿಹಾರದ  ಕುರಿತು ಮಾಹಿತಿ ನೀಡಿದರು. 

ಜಿಲ್ಲೆಯಲ್ಲಿ ಪ್ರಸ್ತುತ ಒಂಭತ್ತು ಪರಿಹಾರ ಕೇಂದ್ರಗಳಲ್ಲಿ 927 ನಿರಾಶ್ರಿತರು ವಾಸ್ತವ್ಯ ಕಲ್ಪಿಸಿರುವುದಾಗಿ ಮಡಿಕೇರಿ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಸಭೆಗೆ ಮಾಹಿತಿ ನೀಡಿದರು.

ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರು ಜಿಲ್ಲಾ ಪಂಚಾಯಿತಿಗೆ ಸಂಭಂಧಿಸಿದ ಯೋಜನೆಗಳ ಪ್ರಗತಿ ಹಾಗೂ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಸಂಬಂಧಿಸಿದ ಕಾಮಗಾರಿಗಳ ಕುರಿತು ಸಭೆಗೆ ಮಾಹಿತಿ ನೀಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸುವ ಕಾಮಗಾರಿಗಳಲ್ಲಿ ಜೆ.ಎಸ್.ಐ ನೀಡಿರುವ ಸಲಹೆಗಳನ್ನು ಬಳಸಿಕೊಂಡು ಸ್ಥಳೀಯ ತಾಂತ್ರಿಕತೆಯೊಂದಿಗೆ ಕಾಮಗಾರಿ ನಿರ್ವಹಿಸುವಂತೆ ಹಾಗೂ ಗ್ರಾಮೀಣ ಭಾಗದ ಕುಡಿಯುವ ನೀರಿನ ಕಾಮಗಾರಿ ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಜಿ.ಪಂ ಸಿಇಒರಿಗೆ ಸಲಹೆ ಮಾಡಿದರು.  

ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕರಿಂದ ನಗರೋತ್ಥಾನ ಕಾಮಗಾರಿ ಬಗ್ಗೆ ಮಾಹಿತಿ ಪಡೆದು ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳ ಬಗ್ಗೆ ಅತೃಪ್ತಿವ್ಯಕ್ತಪಡಿಸಿ ನಗರ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿರುವ ಕಾಮಗಾರಿಗಳನ್ನು ವ್ಶೆಜ್ಞಾನಿಕ ರೀತಿಯಲ್ಲಿ ತುರ್ತಾಗಿ ಮುಗಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ತಾಕೀತು ಮಾಡಿದರು. 

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಆಳಬೇರು ಇರುವಂತಹ ಗಿಡಗಳನ್ನು ಹಾಗೂ ನೀರನ್ನು ತಡೆದಿಟ್ಟುಕೊಳ್ಳುವಂತಹ ಹುಲ್ಲಿನ ಸಸಿಗಳನ್ನು ರಸ್ತೆ ಬದಿಗಳಲ್ಲಿ ನೆಡಲು ಕ್ರಮವಹಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್, ವಿವಿಧ ಇಲಾಖೆಯ ಅಧಿಕಾರಿಗಳು ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News