×
Ad

ಕುಡಿಯುವ ನೀರಿನ ಬಾವಿ ಸ್ವಚ್ಛತೆಗೆ ದಸಂಸ ಮನವಿ

Update: 2018-09-29 23:49 IST

ಚಿಕ್ಕಮಗಳೂರು, ಸೆ.29: ಎನ್.ಆರ್.ಪುರ ತಾಲೂಕಿನ ತಟ್ಟೆಖಾನ್ ಗ್ರಾಮಕ್ಕೆ ಕುಡಿಯುವ ನೀರನ್ನು ಒದಗಿಸುವ ಬಾವಿಯ ನೀರು ಕಲುಷಿತಗೊಂಡಿದ್ದು, ತಕ್ಷಣ ಅದನ್ನು ಶುದ್ದಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಈ ಸಂಬಂಧ ಮನವಿ ಸಲ್ಲಿಸಿದರು.

ಗ್ರಾಮದ ಹಳ್ಳದ ಪಕ್ಕದಲ್ಲಿರುವ ಈ ಬಾವಿಯಿಂದ 12 ಕುಟುಂಬಗಳಿಗೆ ಅನೇಕ ವರ್ಷಗಳಿಂದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಆದರೆ ಇತ್ತೀಚೆಗೆ ಬಾವಿಯ ನೀರು ಸಂಪೂರ್ಣ ಕಲುಷಿತಗೊಂಡಿದೆ, ಇದರಿಂದಾಗಿ ಗ್ರಾಮಸ್ಥರು ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಬಾವಿಯ ನೀರನ್ನು ಸ್ವಚ್ಚಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಉಪಯೋಗವಾಗಿಲ್ಲ ಎಂದ ಅವರು ಗ್ರಾಮಸ್ಥರ ಆರೋಗ್ಯದ ದೃಷ್ಠಿಯಿಂದ ತಕ್ಷಣ ಬಾವಿಯನ್ನು ಸ್ವಚ್ಚಗೊಳಿಸಬೇಕು ಅಥವಾ ಬೇರೆ ಬಾವಿಯನ್ನು ನಿರ್ಮಿಸಿ ನೀರನ್ನು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಮದಲ್ಲಿ ಪರಿಶಿಷ್ಠ ಜಾತಿಯ ಲಲಿತ ಎಂಬುವವರ ಮನೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸಂಪೂರ್ಣ ಬಿದ್ದು ಹೋಗಿದೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

ಮನೆ ಬಿದ್ದು ಹೋಗಿರುವುದರಿಂದ ಕೂಲಿ ಕಾರ್ಮಿಕರಾಗಿರುವ ಮಹಿಳೆ ಪ್ಲಾಸ್ಟಿಕ್ ಟಾರ್ಪಲ್‍ನಲ್ಲಿ ಗುಡಿಸಲು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಆಕೆಗೆ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದರು.

ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಸಂಘಟನಾ ಸಂಚಾಲಕರಾದ ಎಸ್.ಎನ್.ಮಹೇಂದ್ರಸ್ವಾಮಿ, ಡಿ.ರಾಮು, ಎನ್.ಆರ್.ಪುರ ತಾಲ್ಲೂಕು ಸಂಚಾಲಕ ಗಂಗಯ್ಯ, ಹಾಲಪ್ಪ, ಮಂಜಣ್ಣ, ಜಿಲ್ಲಾ ಖಜಾಂಚಿ ಶೇಖರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News