ಸಂಸ್ಕೃತಿ, ಪರಂಪರೆ, ಸಂಸ್ಕಾರ ಸಮಾಜದ ಆಧಾರ ಸ್ಥಂಭಗಳು: ಕೇಂದ್ರ ಸಚಿವ ಸದಾನಂದಗೌಡ

Update: 2018-09-30 16:34 GMT

ಬೆಂಗಳೂರು, ಸೆ.30: ಸಮಾಜಕ್ಕೆ ಸಂಸ್ಕೃತಿ, ಆಚಾರ-ವಿಚಾರ, ಸಂಸ್ಕಾರ, ಪರಂಪರೆ ಆಧಾರ ಸ್ಥಂಭಗಳಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆ ಈ ವಿಷಯದಲ್ಲಿ ಮಾದರಿಯಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ದಕ್ಷಿಣ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ‘ಕರಾವಳಿ ರತ್ನ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಗಳೂರಿನ ಯಕ್ಷಗಾನ ಸೇರಿದಂತೆ ಹಲವು ವಿಚಾರಗಳಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಅದು ದೇಶದ ಮತ್ತೆಲ್ಲಿಯೂ ಕಾಣಲು ಸಿಗುವುದಿಲ್ಲ ಎಂದರು.

ದಕ್ಷಿಣ ಕನ್ನಡ ಜಿಲ್ಲೆ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ನ್ಯಾಯ ವ್ಯವಸ್ಥೆ ಸೇರಿದಂತೆ ಹಲವಾರು ರಂಗಗಳಲ್ಲಿ ಮೊದಲ ಸ್ಥಾನದಲ್ಲಿದೆ. ವಿಭಿನ್ನವಾದ ಬೆಳೆ ಪದ್ಧತಿ ಹೊಂದಿದ್ದು, ಬಲಾಢ್ಯವಾದ ಮೀನುಗಾರರ ಸಂಘ ಹೊಂದಿದೆ. ಅಲ್ಲದೆ, ಮಂಗಳೂರು ಹಾಗೂ ದಕ್ಷಿಣ ಕನ್ನಡದವರು ದೇಶ-ವಿದೇಶಗಳಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ ಎಂದು ಬಣ್ಣಿಸಿದರು.

ಜಾಗತೀಕರಣ ನೆಪದಲ್ಲಿ ಒಂದು ಪ್ರದೇಶಕ್ಕೆ ಸೀಮಿತವಾಗುತ್ತಿದ್ದೇವೆ. ಆದರೆ, ದಕ್ಷಿಣ ಕನ್ನಡದ ಮಣ್ಣಿನಲ್ಲಿ ವಿವಿಧತೆಯನ್ನು ಸಾರುವ ಏಕತೆ ಗುಣವಿದ್ದು, ನಮ್ಮ ವಿಚಾರ, ಸಂಪ್ರದಾಯಗಳು ಎಲ್ಲ ಕಡೆ ಪಸರಿಸಬೇಕು. ತಮಿಳು, ತೆಲುಗು, ಮಲಯಾಳಿ ಭಾಷಿಕರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದ್ದರೂ ಇಲ್ಲಿ ಲೀನವಾಗುತ್ತಿಲ್ಲ. ಆದರೆ, ದಕ್ಷಿಣ ಕನ್ನಡದವರು ಎಲ್ಲಿಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಾರೆಯೋ ಅಲ್ಲಿ ಲೀನವಾಗುತ್ತಿದ್ದಾರೆ ಎಂದು ಹೇಳಿದರು.

ದಕ್ಷಿಣ ಕನ್ನಡ, ಮಂಗಳೂರು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಆದರೆ, ಶಿಕ್ಷಣದ ನಂತರ ಬಹುತೇಕರು ಬೆಂಗಳೂರು, ಮುಂಬೈ, ದುಬೈಗಳಿಗೆ ಕೆಲಸಕ್ಕಾಗಿ ಹೋಗುತ್ತಿದ್ದಾರೆ. ಹೀಗಾಗಿ, ನಮ್ಮವರನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಇದಕ್ಕೆ ಸಹಕಾರ ಮತ್ತು ಜನ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಡ್ವೋಕೇಟ್ ಜನರಲ್ ಉದಯ ಹೊಳ್ಳ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯ ಅಧ್ಯಕ್ಷ ಸುಧಾಕರ ಶೆಟ್ಟಿ, ಉದ್ಯಮಿ ಎನ್.ಆರ್.ರಾಘವೇಂದ್ರರಾವ್ ರವರಿಗೆ ‘ಕರಾವಳಿ ರತ್ನ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು ಹಾಗೂ 50 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದ, ಕರ್ನಾಟಕ ಬ್ಯಾಂಕ್‌ನ ಉಪಾಧ್ಯಕ್ಷ ಪಿ.ಎಚ್.ರಾಜಕುಮಾರ್, ಪ್ರೆಸ್‌ಕ್ಲಬ್‌ನ ಅಧ್ಯಕ್ಷ ಸದಾಶಿವ ಶೆಣೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News