ಹನೂರು: ಪ್ರಚಾರಕ್ಕೆ ಸೀಮಿತವಾದ ಸ್ವಚ್ಚತಾ ಸೇವಾ ಕಾರ್ಯ; ಆರೋಪ
ಹನೂರು,ಸೆ.30: ಕಳೆದ ಎರಡು ದಿನದ ಹಿಂದೆ ಪಪಂ ಆಡಳಿತ ಮಂಡಳಿ ಸ್ವಚ್ಚತಾ ಸೇವಾ ಕಾರ್ಯಕ್ಕೆ ಚಾಲನೆ ನೀಡಿದ್ದು, ಇದು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಇಲ್ಲಿನ ನಿವಾಸಿಗಳು ಪಟ್ಟಣ ಪಂಚಾಯತ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪಟ್ಟಣದ 1 ನೇ ವಾರ್ಡ್ ನ ಸರ್ಕಾರಿ ಆಸ್ಪತ್ರೆಯ ಹಿಂಬಾಗದಲ್ಲಿರುವ ಬಡವಾಣೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಚರಂಡಿಯಲ್ಲಿ ಸರಾಗವಾಗಿ ನೀರು ಹರಿದುಹೋಗದೆ ಹೂಳು ತುಂಬಿಕೊಂಡಿದ್ದು, ಈ ಬಡಾವಣೆಯ ಚರಂಡಿಯಲ್ಲಿ ಮಣ್ಣು ಸಂಗ್ರಹಣೆಯಾಗಿದೆ. ಪರಿಣಾಮ ಕೊಳಚೆ ನೀರು ನಿಂತಿದ್ದು, ಅನೈರ್ಮಲ್ಯ ಮನೆಮಾಡಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ರೋಗ ಹರಡುವ ಭೀತಿ ನಮ್ಮನ್ನು ಆವರಿಸಿದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.
ಕೊಳಚೆ ನೀರು ಮಲೆಮಹದೇಶ್ವರ ಮುಖ್ಯರಸ್ತೆಗೆ ಹರಿಯುತ್ತಿದೆ. ಈ ಬಗ್ಗೆ ಪಪಂಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಲದೆ, ಪಪಂ ಆಡಳಿತ ಮಂಡಳಿ ಬಡಾವಣೆಗೆ ಮೂಲ ಸೌಕರ್ಯವನ್ನು ಒದಗಿಸಲು ಇಲ್ಲಿನ ನಿವಾಸಿಗಳು ನೀಡಿದ ದೂರುಗಳನ್ನು ಕಡೆಗಣಿಸಿದ್ದಾರೆ. ಇದರಿಂದ ಬಡಾವಣೆಯು ಮಣ್ಣಿನ ರಸ್ತೆಯಿಂದ ಕೂಡಿದ್ದು, ಮಳೆ ಬಂದರೆ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದೆ. ಇದರಿಂದ ಸಂಚಾರ ತ್ರಾಸದಾಯಕವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.