ಭಡ್ತಿ ಮೀಸಲಾತಿ ಬಗ್ಗೆ ನಿರಾಶೆ ಬೇಡ: ಸಚಿವ ಎನ್.ಮಹೇಶ್

Update: 2018-09-30 18:00 GMT

ಮಂಡ್ಯ, ಸೆ.30: ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಬಿಲ್ ಪಾಸ್ ಮಾಡಲು ನಮ್ಮ ಸರಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಡ್ತಿ ಮೀಸಲು ಭರವಸೆ ನೀಡಿದ್ದಾರೆ. ಯಾರೂ ಸಹ ಭಡ್ತಿ ಬಗ್ಗೆ ನಿರಾಶರಾಗುವುದು ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಭರವಸೆ ನೀಡಿದರು.

ಪಟ್ಟಣದ ಸಾಹುಕಾರ್ ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಂಘದಿಂದ ರವಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಪರಿಶಿಷ್ಟ ನೌಕರರು ಅಂಬೇಡ್ಕರ್ ಅವರು ನಿಗದಿಪಡಿಸಿದ್ದ ಮೀಸಲಾತಿ ಪಡೆದು ಅಧಿಕಾರ ಪಡೆದಿದ್ದೀರಿ. ಈ ಅಧಿಕಾರವನ್ನು ಹಿಂದುಳಿದವರ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಮೂಲಕ ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸಬೇಕು ಎಂದು ಅವರು ಸಲಹೆ ನೀಡಿದರು.

ನಾನೂ ಎಸೆಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದೆ. ಆಗ ನನ್ನನ್ನು ಪೋಷಕರು ದನ ಕಾಯಲು ಕಳಿಸಿದ್ದರು. ನಂತರ ಸಪ್ಲಿಮೆಂಟರಿ ಪರೀಕ್ಷೆ ಬರೆದು ಪಾಸ್ ಮಾಡಿ ಪಿಯುಸಿ,  ಎಂ.ಎ. ಮಾಡಿ ಅಧಿಕಾರಿಯಾಗಿ ಕೆಲಸ ಮಾಡಿದೆ. ಈಗ ಶಿಕ್ಷಣ ಸಚಿವನಾಗಿದ್ದೇನೆ ಎಂದು ಅವರು ಅನುಭವ ಹೇಳಿಕೊಂಡರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಶಿವಕುಮಾರ್ ಪ್ರಧಾನ ಉಪನ್ಯಾಸ ನೀಡಿದರು. ಸಂಘದ ಪದಾಧಿಕಾರಿಗಳು, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News