ಶಿವಮೊಗ್ಗ: ನಕಲಿ ಬಂಗಾರ ನೀಡಿ ವಂಚನೆ; 'ಮಕ್ಕಳ ಕಳ್ಳರು’ ಶಂಕೆಯಲ್ಲಿ ಏಟು ತಿಂದ ವಂಚಿತರು

Update: 2018-09-30 18:10 GMT

ಶಿವಮೊಗ್ಗ, ಸೆ.30: ವಂಚಕನ ಮಾತು ನಂಬಿ ಬಂಗಾರ ಖರೀದಿಸಲು ಬೆಂಗಳೂರಿನಿಂದ ಆಗಮಿಸಿದ ಐವರು ಯುವಕರ ತಂಡವೊಂದು, 1 ಲಕ್ಷ ರೂ. ಕಳೆದು ಕೊಂಡಿದೆ. ಅಲ್ಲದೆ ಮಕ್ಕಳ ಕಳ್ಳರೆಂಬ ಆರೋಪಕ್ಕೆ ಒಳಗಾಗಿ, ಗ್ರಾಮಸ್ಥರ ಕೈಯಲ್ಲಿ ಏಟು ತಿಂದು ನಂತರ ಪೊಲೀಸರ ಅತಿಥಿಯಾಗಿರುವ ಘಟನೆ, ಶಿವಮೊಗ್ಗ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ರವಿವಾರ ನಡೆದಿದೆ. 

ಬೆಂಗಳೂರಿನ ಯಲಹಂಕದ ನಿವಾಸಿಗಳಾದ ಅಶೋಕ್, ಮೂರ್ತಿ, ಸತೀಶ್, ಅಜಿತ್ ಹಾಗೂ ಅವಿನಾಶ್ ವಂಚನೆಗೊಳಗಾದ ಯುವಕರೆಂದು ಗುರುತಿಸಲಾಗಿದೆ. ವಂಚಕ ಮಂಜುನಾಥ್ ಯುವಕರಿಂದ 1 ಲಕ್ಷ ರೂ. ಪಡೆದು, ನಕಲಿ ಬಂಗಾರ ಕೊಟ್ಟು ಪರಾರಿಯಾದ ಆರೋಪಿಯಾಗಿದ್ದಾನೆ. ಈ ಕುರಿತಂತೆ ಗ್ರಾಮಾಂತರ ಠಾಣೆ ಪೊಲೀಸರು ಯುವಕರಿಂದ ಮಾಹಿತಿ ಕಲೆಹಾಕುತ್ತಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

ಪ್ರಕರಣದ ಹಿನ್ನೆಲೆ: ಕಳೆದೊಂದು ವರ್ಷದ ಹಿಂದೆ ಬೆಂಗಳೂರಿನ ಅಶೋಕ್‌ಗೆ ವಂಚಕ ಮಂಜುನಾಥ್‌ನ ಪರಿಚಯವಾಗಿತ್ತು. ಮೊಬೈಲ್ ಸಂಖ್ಯೆ ಸಂಗ್ರಹಿಸಿದ್ದ ವಂಚಕ ಮಂಜುನಾಥ್‌ನು, ಕಳೆದ ತಿಂಗಳು ಅಶೋಕ್‌ಗೆ ಕರೆ ಮಾಡಿದ್ದ. ‘ತನಗೆ ಬಂಗಾರದ ನಿಧಿ ಸಿಕ್ಕಿದೆ. ಮನೆಯಲ್ಲಿ ಕಷ್ಟವಿರುವುದರಿಂದ ಅದನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ. ಇಷ್ಟವಿದ್ದರೆ ಖರೀದಿಸಿ’ ಎಂದು ಹೇಳಿದ್ದ. ಬಂಗಾರ ಖರೀದಿಸಲು ನಿರ್ಧರಿಸಿದ್ದ ಅಶೋಕ್ ಶಿವಮೊಗ್ಗಕ್ಕೆ ಆಗಮಿಸಿದ್ದ. ಈ ವೇಳೆ ವಂಚಕನು ಮೊದಲೇ ಮಾಡಿಕೊಂಡಿದ್ದ ಸಂಚಿನಂತೆ, ಒಂಬತ್ತು ಗ್ರಾಂ ತೂಕದ ಅಸಲಿ ಚಿನ್ನದ ನಾಣ್ಯವನ್ನು ಸ್ಯಾಂಪಲ್ ಆಗಿ ನೀಡಿದ್ದ. ಇದನ್ನು ಪರೀಕ್ಷಿಸಿಕೊಂಡು ಬಂದ ನಂತರ ಉಳಿದ ಚಿನ್ನ ಖರೀದಿಸುವಂತೆ ಅಶೋಕ್‌ಗೆ ಸೂಚಿಸಿದ್ದ.

ಅದರಂತೆ ಅಶೋಕ್ ಬೆಂಗಳೂರಿಗೆ ಆಗಮಿಸಿ ಚಿನ್ನವನ್ನು ತಪಾಸಣೆಗೊಳಪಡಿಸಿದ್ದ. ಇದು ಅಸಲಿಯಾಗಿದ್ದರಿಂದ ತನ್ನ ಇತರ ನಾಲ್ವರು ಸ್ನೇಹಿತರಿಗೆ ಈ ವಿಷಯ ತಿಳಿಸಿದ್ದ. ಎಲ್ಲರೂ ಒಟ್ಟಾಗಿ ಚಿನ್ನ ಖರೀದಿಸಲು ನಿರ್ಧರಿಸಿದ್ದರು. ಈ ಬಗ್ಗೆ ಆರೋಪಿ ಮಂಜುನಾಥ್‌ನೊಂದಿಗೆ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.
ರವಿವಾರ ಅಶೋಕ್ ಹಾಗೂ ಆತನ ಸ್ನೇಹಿತರು ವಂಚಕನ ಸೂಚನೆಯಂತೆ ತಾಲೂಕಿನ ಕಲ್ಲಾಪುರದ ನಿರ್ಜನ ಪ್ರದೇಶಕ್ಕೆ ಆಗಮಿಸಿದ್ದಾರೆ. ಪೂಜೆ ಮಾಡಿ ಬಟ್ಟೆಯಲ್ಲಿ ಸುತ್ತಿದ ಗಂಟೊಂದನ್ನು ವಂಚಕ ನೀಡಿದ್ದು, ದೇವರ ಮುಂದೆಯೇ ತೆರೆಯಬೇಕೆಂದು ಸೂಚಿಸಿ, 1 ಲಕ್ಷ ರೂ. ಪಡೆದುಕೊಂಡು ಪರಾರಿಯಾಗಿದ್ದಾನೆ. ಅನುಮಾನಗೊಂಡ ಯುವಕರು ಬಟ್ಟೆಯಲ್ಲಿದ್ದ ಚಿನ್ನ ಪರಿಶೀಲಿಸಿದಾಗ ನಕಲಿ ಎಂಬುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಧರ್ಮದೇಟು: ವಂಚನೆಗೊಳಗಾಗಿರುವುದನ್ನರಿತ ಯುವಕರು, ಆರೋಪಿ ಮಂಜುನಾಥನ ಪತ್ತೆಗೆ ಮುಂದಾಗಿದ್ದಾರೆ. ಆರೋಪಿಯನ್ನು ಹುಡುಕುತ್ತ ಕಲ್ಲಾಪುರ ಗ್ರಾಮದೊಳಗೆ ಆಗಮಿಸಿದ್ದಾರೆ. ಇವರನ್ನು ಗಮನಿಸಿದ ಗ್ರಾಮಸ್ಥರು ಅನುಮಾನಗೊಂಡಿದ್ದಾರೆ. ಮಕ್ಕಳ ಕಳ್ಳರೆಂಬ ಶಂಕೆಯ ಮೇಲೆ ಯುವಕರನ್ನು ಹಿಡಿದು, ದೇವಾಲಯದಲ್ಲಿ ಕಟ್ಟಿ ಹಾಕಿ ಥಳಿಸಿದ್ದಾರೆ. ಜೊತೆಗೆ ಪೊಲೀಸರಿಗೂ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಠಾಣೆ ಪೊಲೀಸರು ಯುವಕರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆ ತಂದಿದ್ದಾರೆ. ವಿಚಾರಣೆಯ ವೇಳೆ ಯುವಕರೇ ವಂಚಕನ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿರುವ ವೃತ್ತಾಂತ ಬಯಲಿಗೆ ಬಂದಿದೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ನಕಲಿ ಚಿನ್ನ ವಂಚಕರ ಹಾವಳಿ
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಕಲಿ ಬಂಗಾರ ವಂಚಕರ ಗ್ಯಾಂಗ್ ದೊಡ್ಡ ಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ. ಈ ವಂಚಕರ ಜಾಲಕ್ಕೆ ಸಿಲುಕಿ ಈಗಾಗಲೇ ಹಲವು ಅಮಾಯಕರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಈ ಕುರಿತಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News