ಶಿವಮೊಗ್ಗ: ಗಾಂಧಿ ಜಯಂತಿಯಂದು ಕಿಮ್ಮನೆ ರತ್ನಾಕರ್ ರಿಂದ 24 ಗಂಟೆಗಳ ಉಪವಾಸ ಸತ್ಯಾಗ್ರಹ

Update: 2018-09-30 18:14 GMT

ಶಿವಮೊಗ್ಗ, ಸೆ. 30: ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿದೆ ಹಾಗೂ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್‍ರವರು 24 ಗಂಟೆಗಳ ಉಪವಾಸ ಸತ್ಯಾಗ್ರಹವನ್ನು ಅಕ್ಟೋಬರ್ 2 ಗಾಂಧಿ ಜಯಂತಿಯಂದು ಹಮ್ಮಿಕೊಂಡಿದ್ದಾರೆ. 

ತೀರ್ಥಹಳ್ಳಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಈ ಸತ್ಯಾಗ್ರಹ ನಡೆಸಲಿದ್ದಾರೆ. ಅ. 2 ರಂದು ಬೆಳಿಗ್ಗೆ 9 ಗಂಟೆಯಿಂದ ಮರುದಿನ ಬೆಳಿಗ್ಗೆ 9 ಗಂಟೆಯವರೆಗೆ ಈ ಸತ್ಯಾಗ್ರಹ ನಡೆಸಲಿದ್ದಾರೆ. ಇದೇ ವೇಳೆ ತಾಲೂಕು ಕಚೇರಿ ಮುಂಭಾಗದಲ್ಲಿ ವೇದಿಕೆಯೊಂದನ್ನು ವ್ಯವಸ್ಥೆಗೊಳಿಸಿ ವಿಚಾರ ಸಂಕಿರಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುತ್ತಿದ್ದಾರೆ. 

ದತ್ತಾರದಿಂದ ಚಾಲನೆ: ಈ ಕುರಿತಂತೆ ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಕಿಮ್ಮನೆ ರತ್ನಾಕರ್ ಮಾತನಾಡಿದರು. ಮಾಜಿ ಶಾಸಕ ವೈ.ಎಸ್.ವಿ.ದತ್ತ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಲಿದ್ದಾರೆ. ರಾಮಮನೋಹರ ಲೋಹಿಯಾ ಚಿಂತನೆ ಮತ್ತು ಪ್ರಸ್ತುತತೆ, ಕನ್ನಡ ಸಾಹಿತ್ಯದಲ್ಲಿ ಗಾಂಧಿ ಮೌಲ್ಯಗಳು, ಬುದ್ದ ಮತ್ತು ಅಂಬೇಡ್ಕರ್, ಗಾಂಧಿ ಮತ್ತು ಸಮಕಾಲಿನ ಸಮಾಜ, ಸ್ವಾಮಿ ವಿವೇಕಾನಂದರ ಕ್ರಾಂತಿಕಾರಕ ಚಿಂತನೆಗಳು, ಸ್ವಾಮಿ ವಿವೇಕಾನಂದರ ವಿಚಾರಧಾರೆ, ವಚನ ಚಳವಳಿಯ ಸಮಕಾಲೀನತೆ, ದಾರ್ಶನಿಕ ನಾರಾಯಣ ಗುರು ಚಿಂತನೆಯ ವಿಚಾರ ಸಂಕಿರಣಗಳು ನಡೆಯಲಿವೆ. ಸಂಜೆ 6-30 ರಿಂದ 8-30 ರವರೆಗೆ ಸಮಾಜವಾದ ಸ್ವಾತಂತ್ರ್ಯ ಪೂರ್ವ ಮತ್ತು ನಂತರ, ನವ ಭಾರತ ನಿರ್ಮಾಣದಲ್ಲಿ ನೆಹರು, ಪ್ರಸ್ತುತ ರಾಜಕಾರಣದಲ್ಲಿನ ತಲ್ಲಣಗಳು ವಿಷಯದ ಕುರಿತಂತೆ ಚರ್ಚೆಗಳು ನಡೆಯಲಿವೆ. 

ರಾತ್ರಿ 9 ಗಂಟೆಯಿಂದ 11 ರವರೆಗೆ ಗಾಂಧಿಗೆ ಸಾವಿಲ್ಲ ನಾಟಕ ಹಾಗೂ ರಾತ್ರಿ 11.30 ರಿಂದ ಬೆಳಗ್ಗಿನ ಜಾವದವರೆಗೂ ಸತ್ಯ ಹರಿಶ್ಚಂದ್ರ ಹಾಗೂ ಕೃಷ್ಣ ಪರಂಧಾಮ ಯಕ್ಷಗಾನ ನಡೆಯಲಿದೆ ಎಂದು ಕಿಮ್ಮನೆ ರತ್ನಾಕರ್ ರವರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News