ಕೇರಳದ ಲಾಟರಿ ಅಕ್ರಮ ಮಾರಾಟ: ಸುಂಟಿಕೊಪ್ಪದಲ್ಲಿ ಮೂವರ ಬಂಧನ

Update: 2018-09-30 18:21 GMT

ಮಡಿಕೇರಿ, ಸೆ.30: ನೆರೆಯ ಕೇರಳ ರಾಜ್ಯದ ಲಾಟರಿಯನ್ನು ಅಕ್ರಮವಾಗಿ ಕೊಡಗಿನ ವಿವಿಧೆಡೆಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸುಂಟಿಕೊಪ್ಪ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಈ ಸಂಬಂಧ ಮೂರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸುಂಟಿಕೊಪ್ಪದ ನಿವಾಸಿ, ಎಳನೀರು ವ್ಯಾಪಾರಿ ಸಲೀಂ ಅಲಿಯಾಸ್ ತನು (44), 7ನೇ ಹೊಸಕೊಟೆಯ ಉಪ್ಪುತೋಡು ನಿವಾಸಿ ಕೂಲಿ ಕಾರ್ಮಿಕ ಮೂಸ (44) ಹಾಗೂ 7ನೇ ಹೊಸಕೊಟೆ ಕಲ್ಲುಕೋರೆ ನಿವಾಸಿ, ಆಟೋ ಚಾಲಕ ದೇವರಾಜು (53) ಎಂದು ಗುರುತಿಸಲಾಗಿದ್ದು, ಆರೋಪಿಗಳಿಂದ 3.17ಲಕ್ಷ ಮುಖ ಬೆಲೆಯ 9319 ಟಿಕೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಮಾರಾಟ ಜಾಲದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಲಾಟರಿ ಮಾರಾಟದ ಬಗ್ಗೆ ಮಾಹಿತಿ ಕಲೆ ಹಾಕಿ ದಾಳಿ ನಡೆಸುವಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಸುಮನ್ ಪೆನ್ನೇಕರ್ ನಿರ್ದೇಶನ ನೀಡಿದ್ದರು. ಅದರಂತೆ ಸೆ.30ರಂದು ಸುಂಟಿಕೊಪ್ಪ ನಗರದ 1ನೇ ಬ್ಲಾಕ್‍ನ ವಾಸಿ ಸಲೀಂ ಅಲಿಯಾಸ್ ತನು ಎಂಬಾತ ಕೇರಳ ರಾಜ್ಯದ ಲಾಟರಿಯನ್ನು ಮಾರಾಟ ಮಾಡುವ ಉದ್ದೇಶದಿಂದ ಇಟ್ಟುಕೊಂಡಿರುವ ಬಗ್ಗೆ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‍ಪೆಕ್ಟರ್ ಎಂ. ಮಹೇಶ್ ಹಾಗೂ ಸಿಬ್ಬಂದಿಯವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಂತೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಯವರೊಂದಿಗೆ ಸಲೀಂ ಮನೆಯ ಮೇಲೆ ಪಂಚರೊಂದಿಗೆ ದಾಳಿ ನಡೆಸಲಾಯಿತು.

ಈ ಸಂದರ್ಭ ಮನೆಯಲ್ಲಿ ಇನ್ನಿಬ್ಬರು ವ್ಯಕ್ತಿಗಳೂ ಇದ್ದು ಒಂದು ಕೋಣೆಯ ಮಂಚದ ಮೇಲೆ ಲಾಟರಿ ಟಿಕೆಟ್‍ಗಳನ್ನು ಹಾಕಿಕೊಂಡು ಹಂಚಿಕೊಳ್ಳುತ್ತಿದ್ದುದು ಕಂಡು ಬಂದಿತು. ಅವರ ಹೆಸರುಗಳನ್ನು ವಿಚಾರಿಸಿದಾಗ ಮೂಸ ಹಾಗೂ ದೇವರಾಜು ಎಂದೂ ಲಾಟರಿಯನ್ನು ಮಾರಾಟ ಮಾಡುವ ಬಗ್ಗೆ ಸಲೀಂನಿಂದ ಖರೀದಿಸಲು ಬಂದಿರುವುದಾಗಿ ಮಾಹಿತಿ ದೊರೆತಿದೆ. ಕೂಡಲೇ ಅವರನ್ನು ವಶಕ್ಕೆ ಪಡೆದು ಪಂಚರ ಸಮಕ್ಷಮ ಅಲ್ಲಿದ್ದ ಒಟ್ಟು 3,17,570 ರೂ. ಮೌಲ್ಯದ ವಿವಿಧ ಮುಖ ಬೆಲೆಯ 9,319 ಕೇರಳ ರಾಜ್ಯ ಲಾಟರಿ ಟಿಕೇಟ್‍ನ್ನು ವಶಪಡಿಸಿಕೊಳ್ಳಲಾಯಿತು.

ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೇರಳದ ಇರಿಟ್ಟಿ ನಗರದಿಂದ ಸುಂಟಿಕೊಪ್ಪ ನಿವಾಸಿ ಅತೀಕ್ ಎಂಬವರ ಮೂಲಕ ಈ ಲಾಟರಿ ಟಿಕೆಟ್‍ಗಳನ್ನು ತರಿಸಿಕೊಂಡಿರುವುದಾಗಿ ಮತ್ತು ಅವುಗಳನ್ನು ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆಗಳಲ್ಲಿ ಸಂತೆ ನಡೆಯುವ ದಿನ ಮಾರಾಟ ಮಾಡಲು ಹಂಚಿಕೊಳ್ಳುತ್ತಿದ್ದುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಮಹೇಶ್, ಸುಂಟಿಕೊಪ್ಪ ಠಾಣಾ ಪಿಎಸ್‍ಐ ಎಸ್.ಎನ್. ಜಯರಾಂ, ಎಎಸ್‍ಐ ಹಮೀದ್ ಸಿಬ್ಬಂದಿಗಳಾದ ತಮ್ಮಯ್ಯ, ಅನಿಲ್, ವೆಂಕಟೇಶ್, ನಿರಂಜನ, ಯೋಗೇಶ್, ಸುಂಟಿಕೊಪ್ಪ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಧನುಕುಮಾರ್, ಅಬ್ದುಲ್ ರೆಹಮಾನ್, ಪುನೀತ್ ಹಾಗೂ ಚಾಲಕರಾದ ಶಶಿಕುಮಾರ್, ರವಿ ರವರು ಭಾಗವಹಿಸಿದ್ದರು.   

ಮಾಹಿತಿ ನೀಡಲು ಎಸ್‍ಪಿ ಮನವಿ
ಈ ಪ್ರಕರಣವನ್ನು ಪತ್ತೆ ಹಚ್ಚಿದ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕರು ನಗದು ಬಹುಮಾನ  ಘೋಷಿಸಿದ್ದಾರೆ. ಕೊಡಗು ಜಿಲ್ಲೆಯಾದ್ಯಂತ ಅಕ್ರಮ ಲಾಟರಿ ಮಾರಾಟ ಜಾಲ ಹಬ್ಬಿಕೊಂಡಿದ್ದು, ಈ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ ಬೀಟ್ ಅಧಿಕಾರಿಗಳಿಗಾಗಲೀ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಯ ಪಿಎಸ್‍ಐ ರವರಿಗಾಗಲಿ ನೀಡುವಂತೆ ಕೋರಿದ್ದಾರೆ. ಅಲ್ಲದೆ ಪೊಲೀಸ್ ಇಲಾಖೆ  ವತಿಯಿಂದ ಜಿಲ್ಲೆಯ ಸುಮಾರು 30 ಕಡೆಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇರಿಸಿದ್ದು, ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ನೀಡಬಹುದಾಗಿದೆ. ಮಾಹಿತಿ ನೀಡುವ ಸಾರ್ವಜನಿಕರು ತಮ್ಮ ಹೆಸರು ನಮೂದಿಸುವ ಅಗತ್ಯವಿಲ್ಲ.  ಹೆಸರು ನಮೂದಿಸಿ ಮಾಹಿತಿ ನೀಡಿದ ಸಾರ್ವಜನಿಕರ ವಿವರವನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News