ಮುಸ್ಲಿಂ ಯುವಕನನ್ನು ಪ್ರೀತಿಸಿದ ಯುವತಿಗೆ ಹಲ್ಲೆ ಪ್ರಕರಣ: ಪೊಲೀಸರಿಗೆ ‘ವಿಐಪಿ’ ವರ್ಗಾವಣೆ, ಆರೋಪಿಗಳ ಬಂಧನವಿಲ್ಲ

Update: 2018-10-01 11:18 GMT

ಮೀರತ್, ಅ.1: ಮೀರತ್ ನಗರದಲ್ಲಿ ಇತ್ತೀಚೆಗೆ ಮುಸ್ಲಿಂ ಯುವಕನನ್ನು ಪ್ರೀತಿಸಿದ ಯುವತಿಗೆ ಪೊಲೀಸರು ವ್ಯಾನ್ ನಲ್ಲಿ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಹಲ್ಲೆಗೈದ ಪೊಲೀಸರನ್ನು ಗೋರಖಪುರಕ್ಕೆ ವರ್ಗಾವಣೆಗೊಳಿಸಲಾಗಿದೆ. ಆದರೆ ಪೊಲೀಸರನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕ್ಷೇತ್ರಕ್ಕೆ ವರ್ಗಾವಣೆ ಮಾಡಲಾಗಿರುವುದರಿಂದ ಅವರಿಗೆ ನಿಜವಾಗಿಯೂ ಶಿಕ್ಷೆ ನೀಡಲಾಗಿದೆಯೇ ಎಂಬ ಪ್ರಶ್ನೆ ಈಗ ಎದ್ದಿದೆ.

ಮಹಿಳೆಗೆ ಹಲ್ಲೆ ನಡೆಸುವ ಮುನ್ನ ಆಕೆಯ ಪ್ರಿಯಕರನಿಗೂ ಹಲ್ಲೆ ನಡೆಸಲಾಗಿತ್ತು. ಘಟನೆ ನಡೆದು ಒಂದು ವಾರವಾದರೂ ವೀಡಿಯೋದಲ್ಲಿ ಕಾಣಿಸಿರುವ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವವರಲ್ಲಿ ಒಬ್ಬರನ್ನೂ ಬಂಧಿಸಲಾಗಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳಾದ ಸಂತ್ರಸ್ತರಿಬ್ಬರಿಗೂ ನ್ಯಾಯ ದೊರಕಿಸುವುದಾಗಿ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆಯನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಒ.ಪಿ. ಸಿಂಗ್ ನೀಡಿದ್ದರೂ ಹಾಗಾಗಿಲ್ಲ. ವಿಹಿಂಪ ಜತೆ ನಂಟು ಹೊಂದಿರುವ ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಯುವಕನಿಗೆ ದುಷ್ಕರ್ಮಿಗಳು ಹಲ್ಲೆಗೈಯ್ಯುತ್ತಿರುವುದನ್ನು ಕಂಡೂ ಕಾಣದಂತಿದ್ದ ಪೊಲೀಸರು ನಂತರ ಮಹಿಳೆಯ ಮೇಲೆ ಹಲ್ಲೆಗೈದಿದ್ದಾರೆ. ಆದರೂ ಅವರ ವಿರುದ್ಧ ಮಾತ್ರ ಯಾವುದೇ ಪ್ರಕರಣ ದಾಖಲಾಗಿಲ್ಲ.

``ಕಾಲೇಜಿಗೆ ಹೋಗಲು ಮನಸ್ಸಾಗುತ್ತಿಲ್ಲ, ಭಯ ಹಾಗೂ ಮುಜುಗರವಾಗುತ್ತಿದೆ, ಆರೋಪಿಗಳು ಮತ್ತವರ ಸಂಬಂಧಿಕರಿಂದ ಬೆದರಿಕೆ ಕರೆಗಳೂ ಬರುತ್ತಿವೆ,'' ಎಂದು  ಸಂತ್ರಸ್ತ ಯುವಕ  ಹೇಳುತ್ತಾರೆ. ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಡುವ ಸಲುವಾಗಿ ಪೊಲೀಸ್ ವ್ಯಾನಿನಲ್ಲಿ ಯುವತಿಯ ಮೇಲೆ ಹಲ್ಲೆಗೈಯ್ದ ಪೊಲೀಸರನ್ನು ಗೋರಖಪುರಕ್ಕೆ ವರ್ಗಾಯಿಸಲಾಗಿದೆ ಎಂಬ ಸಬೂಬು ಪೊಲೀಸರಿಂದ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News