ಮಡಿಕೇರಿ: ಗುಂಡಿಕ್ಕಿ ಸ್ಥಳೀಯ ಬಿಜೆಪಿ ನಾಯಕನ ಹತ್ಯೆ

Update: 2018-10-01 15:46 GMT

ಮಡಿಕೇರಿ ಅ.1: ಸ್ಥಳೀಯ ಬಿಜೆಪಿ ನಾಯಕರೊಬ್ಬರನ್ನು ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಮರಗೋಡು ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಕಾನಡ್ಕ ತಿಲಕರಾಜ್ (40) ಮೃತಪಟ್ಟ ವ್ಯಕ್ತಿಯಾಗಿದ್ದು, ಗ್ರಾಪಂ ಸದಸ್ಯ ಮುಂಡೋಡಿ ನಂದಾ ನಾಣಯ್ಯ ಗುಂಡಿಕ್ಕಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಈತ ತಲೆಮರೆಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇಂದು ಸಂಜೆ ಮರಗೋಡು ಜಂಕ್ಷನ್ ಬಳಿ ತಿಲಕ್ ರಾಜ್ ಹಾಗೂ ನಂದ ನಾಣಯ್ಯ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭ ನಂದಾ ನಾಣಯ್ಯ ತಿಲಕರಾಜ್ ಗೆ ಗುಂಡಿಕ್ಕಿದ್ದ ಎಂದು ಆರೋಪಿಸಲಾಗಿದೆ. ಗುಂಡೇಟಿನಿಂದ ಗಾಯಗೊಂಡ ತಿಲಕರಾಜ್ ಅವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆ ತರುವ ಸಂದರ್ಭ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.

ರಾಜಕೀಯ ವೈಷಮ್ಯವೇ ಕೃತ್ಯಕ್ಕೆ ಕಾರಣವೆಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಡಿವೈಎಸ್‍ಪಿ ಸುಂದರ್ ರಾಜ್, ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾಸಕರ ಭೇಟಿ

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ,ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿರುವುದಾಗಿ ಬೇಸರ ವ್ಯಕ್ತಪಡಿಸಿದರು. ರಾಜಕೀಯ ವೈಷಮ್ಯದಿಂದ ಹತ್ಯೆ ನಡೆದಿರುವುದು ಅತ್ಯಂತ ಖಂಡನೀಯ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News