×
Ad

ಹನೂರು: ರಾಷ್ಟ್ರಪತಿ ಪದಕ ಪುರಸ್ಕೃತ ಎಸಿಪಿ ಸಿ.ಗೋಪಾಲ್ ರಿಗೆ ಸನ್ಮಾನ

Update: 2018-10-01 23:47 IST

ಹನೂರು,ಅ.1: ರಾಷ್ಟ್ರಪತಿ ಪದಕದ ಭಾಜನದ ಯಶಸ್ಸಿಗೆ ನನ್ನ ಕುಟುಂಬಸ್ಥರ ಮಾರ್ಗದರ್ಶನ, ಗ್ರಾಮಸ್ಥರ ಪ್ರೋತ್ಸಾಹ, ಸಹಕಾರ ಹಾಗೂ ಪ್ರೀತಿ ವಿಶ್ವಾಸವೇ ಕಾರಣ ಎಂದು ಮೈಸೂರು ನರಸಿಂಹರಾಜ ವಿಭಾಗದ ಎಸಿಪಿ ಸಿ.ಗೋಪಾಲ್ ತಿಳಿಸಿದರು.

ಹನೂರು ಸಮೀಪದ ಮಂಗಲ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮಸ್ಥರು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿರುವ ಎಸಿಪಿ ಸಿ.ಗೋಪಾಲ್ ಅವರಿಗೆ ಆಯೋಜಿಸಿದ್ಧ ‘ಊರ ಮಗನಿಗೆ ಅಭಿನಂದನಾ ಕಾರ್ಯಕ್ರಮ’ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನನ್ನ ವಿದ್ಯಾಭ್ಯಾಸದ ಅವಧಿಯಲ್ಲಿ ಶಿಕ್ಷಣ ಪಡೆಯುವುದು ಕಷ್ಟವಿತ್ತು. ಈ ಸಂದರ್ಭದಲ್ಲಿ ನನ್ನ ತಂದೆ ತಾಯಿ, ಸಹೋದರ, ಸಹೋದರಿಯರು ನನ್ನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉತ್ತಮ ಶಿಕ್ಷಣ ಕೊಡಿಸಿದರು. ಈ ದಿಸೆಯಲ್ಲಿ ತುಂಬಾ ಶ್ರಮವಹಿಸಿ ಪೋಲಿಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ. ಈ ವೇಳೆ ಗ್ರಾಮಸ್ಥರು ಸಹ ಪ್ರೋತ್ಸಾಹ ನೀಡಿದ್ದಾರೆ. ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸರ್ಕಾರ ಕಳೆದ 2014ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಿದೆಯಲ್ಲದೇ ಇದೀಗ ರಾಷ್ಟ್ರಪತಿ ಪದಕಕ್ಕೂ ಭಾಜನನಾಗಿದ್ದೇನೆ. ಇನ್ನು ಮುಂದೆಯು ಇಲಾಖೆಯಲ್ಲಿ ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ನನ್ನ ಬಗ್ಗೆ ಅಭಿಮಾನ ಇಟ್ಟುಕೊಂಡು ಸನ್ಮಾನಿಸಿದ ಗ್ರಾಮಸ್ಥರಿಗೆ ಸದಾ ಋಣಿಯಾಗಿರುತ್ತೇನೆ ಎಂದು ತಿಳಿಸಿದರು.

ಬೆಂಗಳೂರು ಬಿಎಂಎಫ್‍ಟಿ ಇನ್ಸ್ ಪೆಕ್ಟರ್ ಹೆಚ್.ಕೆ ಮಹಾನಂದ ಮಾತನಾಡಿ, ಗೋಪಾಲ್ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸರ್ಕಾರ ರಾಷ್ಟ್ರಪತಿ ಪದಕ ನೀಡಿದೆ. ಈ ದಿಸೆಯಲ್ಲಿ ಇವರು ಗ್ರಾಮದ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಆದ್ದರಿಂದ ಇದರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಾಧನೆಗೈದು ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು. 

ಈ ವೇಳೆ ಗ್ರಾಮದಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಬುದ್ದವಿಹಾರಕ್ಕೆ ಸ್ಥಳ ನೀಡುವುದಾಗಿ ಘೋಷಿಸಿದರು. ಬಳಿಕ ರಾಷ್ಟ್ರಪತಿ ಪದಕ ಪುರಸ್ಕೃತರಾದ ಸಿ. ಗೋಪಾಲ್ ಹಾಗೂ ಬೆಂಗಳೂರು ಸಿಐಡಿ ಕಚೇರಿಯ ಡಿವೈಎಸ್ಪಿ ಪುರುಷೋತ್ತಮ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. 

ಈ ಸಂದರ್ಭ ಮೈಸೂರಿನ ಉರಿಲಿಂಗ ಪೆದ್ದಿ ಮಠಾಧ್ಯ್ಯಕ್ಷ ಜ್ಞಾನಪ್ರಕಾಶ ಸ್ವಾಮೀಜಿ, ಬೆಂಗಳೂರು ವಾಣಿಜ್ಯ ಇಲಾಖೆಯ ಜಂಟಿ ಆಯುಕ್ತ ರಮೇಶ್‍ಕುಮಾರ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮುಖ್ಯಸ್ಥ ಕೇಶವನ್‍ಪ್ರಸಾದ್, ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ವಿ.ಸಾಂಬಾಜಿರಾವ್, ಕೊಳ್ಳೇಗಾಲ ಡಿವೈಎಸ್ಪಿ ಪುಟ್ಟಮಾದಯ್ಯ, ಸಣ್ಣ ಉಳಿತಾಯ ಲಾಟರಿ ಹಾಗೂ ಹಣಕಾಸು ಇಲಾಖೆಯ ನಿವೃತ್ತ ವ್ಯವಸ್ಥಾಪಕ ಸಾವುಕಯ್ಯ, ಸೋಲಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಿ.ರಂಗಸ್ವಾಮಿ ಹಾಗೂ ಮಂಗಲ, ಕಾಮಗೆರೆ, ದೊಡ್ಡಿಂದುವಾಡಿ, ಹನೂರು, ಗುಂಡಾಪುರ, ಕಣ್ಣೂರು, ಜಿ.ಕೆ ಹೊಸೂರು ಹಾಗೂ ಈ ಭಾಗದ ಇನ್ನಿತರ ಗ್ರಾಮದ ಗ್ರಾಮಸ್ಥರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News