×
Ad

ಮಡಿಕೇರಿ: ಬಿಜೆಪಿ ನಾಯಕನ ಹತ್ಯೆ ಪ್ರಕರಣ; ಆರೋಪಿ ಬಂಧನ

Update: 2018-10-02 18:26 IST
ಆರೋಪಿ ಮುಂಡೋಡಿ ನಂದ ನಾಣಯ್ಯ

ಮಡಿಕೇರಿ, ಅ.2: ಸ್ಥಳಿಯ ಬಿಜೆಪಿ ನಾಯಕ ಮರಗೋಡು ಗ್ರಾಮದ ಕಾನಡ್ಕ ತಿಲಕ್‍ರಾಜ್ ಅವರನ್ನು ಗುಂಡಿಕ್ಕಿ ಕೊಲೆಗೈದ ಬಳಿಕ ತಲೆ ಮರೆಸಿಕೊಳ್ಳಲು ಯತ್ನಿಸಿದ ಆರೋಪಿ ಮುಂಡೋಡಿ ನಂದ ನಾಣಯ್ಯ ಅವರನ್ನು ಘಟನೆ ನಡೆದ 6 ಗಂಟೆಗಳ ಒಳಗಾಗಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಿಲಕ್‍ರಾಜ್ ಅವರನ್ನು ಹತ್ಯೆ ಮಾಡಿದ ಬಳಿಕ ಕೃತ್ಯಕ್ಕೆ ಬಳಸಿದ್ದ ಡಸ್ಟರ್ ವಾಹನವನ್ನು ಮನೆಯಲ್ಲಿ ನಿಲ್ಲಿಸಿ ತನ್ನ ಬೈಕ್‍ನಲ್ಲಿ ಆಯುಧ ಮತ್ತು ಸಜೀವ ಗುಂಡುಗಳೊಂದಿಗೆ ತಪ್ಪಿಸಿಕೊಳ್ಳಲು ನಂದ ನಾಣಯ್ಯ ಪ್ರಯತ್ನಿಸಿದ್ದರು ಎನ್ನಲಾಗಿದೆ.

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಂತೆ ಮಡಿಕೇರಿ ಡಿವೈಎಸ್‍ಪಿ ಸುಂದರರಾಜ್ ಹಾಗೂ ಡಿಸಿಐಬಿ ಇನ್ಸ್ ಪೆಕ್ಟರ್ ಮಹೇಶ್ ಅವರ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು.
ಕೊಲೆ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಡಿವೈಎಸ್‍ಪಿ ಸುಂದರರಾಜ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ರಿವಾಲ್ವರ್, ಸಜೀವ ಗುಂಡುಗಳು, ಒಂದು ಡಸ್ಟರ್ ವಾಹನ ಮತ್ತು ಒಂದು ಮೋಟಾರ್ ಬೈಕ್‍ನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿಕೇರಿ ಗ್ರಾಮಾಂತರ ಪ್ರಭಾರ ವೃತ್ತ ನಿರೀಕ್ಷಕ ಎಂ.ಎಂ.ಭರತ್, ಉಪ ನಿರೀಕ್ಷಕ ಚೇತನ್, ಎಎಸ್‍ಐ ರಾಜು. ಸಿಬ್ಬಂದಿಗಳಾದ ಕಿರಣ್, ಇಬ್ರಾಹಿಂ, ಸತೀಶ್‍, ಹನೀಫ್, ಶಿವರಾಜೇಗೌಡ ಹಾಗೂ ಚಾಲಕರಾದ ಮೋಹನ್ ಮತ್ತು ಅರುಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಶ್ಲಾಘಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News