ಮಹಾತ್ಮ ಗಾಂಧಿ ನಮ್ಮ ನೆಮ್ಮದಿಯ ಬದುಕಿಗೆ ದಾರಿದೀಪ: ಬಸವರಾಜ ಹೊರಟ್ಟಿ

Update: 2018-10-02 14:37 GMT

ಧಾರವಾಡ, ಅ.2: ತ್ಯಾಗ, ಬಲಿದಾನದ ಮೂಲಕ ಈ ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿ, ನಮ್ಮ ನೆಮ್ಮದಿಯ ಬದುಕಿಗೆ ದಾರಿ ಮಾಡಿ ಕೊಟ್ಟ ಮಹಾತ್ಮರ ಜಯಂತಿಗಳಲ್ಲಿ ಭಾಗವಹಿಸಿ ಅವರನ್ನು ಸ್ಮರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಇಂದಿನ ಮಕ್ಕಳಿಗೆ ಮಹಾತ್ಮಾ ಗಾಂಧೀ ಹಾಗೂ ಲಾಲ್‌ಬಹಾದ್ದೂರ್ ಶಾಸ್ತ್ರಿಯವರ ವಿಚಾರಗಳು ಹಾಗೂ ಸರಳತೆಯನ್ನು ಪರಿಚಯಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ರವಿವಾರ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ 150ನೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ಭಾರತ ಮಾತ್ರವಲ್ಲ, ಇಡೀ ಜಗತ್ತು ಕಂಡ ಅಪರೂಪದ ವ್ಯಕ್ತಿ. ಐತಿಹಾಸಿಕ ಪುರುಷರಾಗಿದ್ದಾರೆ. ಅವರ ಸಹನೆ, ಅಹಿಂಸೆ, ತ್ಯಾಗ, ಹೋರಾಟದ ಫಲವಾಗಿ ಅಹಿಂಸಾ ಮಾರ್ಗದಲ್ಲಿ ಸಾಗಿ ಬ್ರಿಟಿಷರ ಆಡಳಿತ ವ್ಯವಸ್ಥೆಯಿಂದ ಸ್ವಾತಂತ್ರ ಪಡೆಯಲು ಸಾಧ್ಯವಾಯಿತು ಎಂದರು.

ಇಂದು ಮಾಜಿ ಪ್ರಧಾನಿ ಲಾಲ್‌ಬಹದ್ದೂರ ಶಾಸ್ತ್ರೀಯವರ ಜನ್ಮದಿನವೂ ಹೌದು. ಅವರ ಮಾದರಿ ಬದುಕು, ಆದರ್ಶ, ವ್ಯಕ್ತಿತ್ವ ನಮಗೆ ಸದಾ ದಾರಿದೀಪವಾಗಿದೆ. ಭಾರತ ಕಂಡ ಶ್ರೇಷ್ಠ ಅಪರೂಪದ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಆಗಿದ್ದಾರೆ. ಅವರ ಜೈ ಜವಾನ್ ಜೈ ಕಿಸಾನ್ ಘೋಷಣೆ ಹಾಗೂ ದೇಶವು ಆಹಾರದ ಕೊರತೆ ಎದುರಿಸುತ್ತಿದ್ದ ಸಂದರ್ಭದಲ್ಲಿ ವಾರಕ್ಕೊಂದು ದಿನ ಉಪವಾಸ ಆಚರಿಸುವ ಪದ್ಧತಿ ದೇಶದಾದ್ಯಂತ ರೂಢಿಗೆ ಬಂದಿತು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಗಾಂಧೀವಾದಿ ಡಾ. ಸಂಜೀವ್ ಕುಲಕರ್ಣಿ ಮಾತನಾಡಿ, ಜಗತ್ತಿನ ಬಹುತೇಕ ದೇಶಗಳಿಂದ ಗೌರವ ಪಡೆಯುತ್ತಿರುವ ಏಕೈಕ ವ್ಯಕ್ತಿ ಮಹಾತ್ಮಾ ಗಾಂಧೀಜಿಯಾಗಿದ್ದಾರೆ. ಅವರ ಜನ್ಮದಿನವನ್ನು ಅಹಿಂಸಾ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಧೈರ್ಯ ಹಾಗೂ ಪ್ರಯೋಗಶೀಲತೆ ಅವರ ಗುಣಗಳಾಗಿದ್ದವು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಂಗೀತಾ ಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News