×
Ad

ರಾಜ್ಯಾದ್ಯಂತ ಹೆಚ್ಚುತ್ತಿರುವ ಎಚ್1ಎನ್1 ಭೀತಿ: ಸೆಪ್ಟೆಂಬರ್‌ನಲ್ಲಿ 200 ಕ್ಕೂ ಅಧಿಕ ಪ್ರಕರಣಗಳು ದೃಢ

Update: 2018-10-02 19:27 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.2: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಎಚ್1ಎನ್1 ಭೀತಿ ಹೆಚ್ಚಾಗುತ್ತಿದ್ದು, ಕಳೆದ ಸೆಪ್ಟೆಂಬರ್ ಒಂದು ತಿಂಗಳಲ್ಲಿಯೇ 200 ಕ್ಕೂ ಅಧಿಕ ಪ್ರಕರಣಗಳು ದೃಢಪಟ್ಟಿವೆ.

2018ರ ಜನವರಿಯಿಂದ ಸೆಪ್ಟೆಂಬರ್ ವರೆಗೆ ಒಟ್ಟು 4 ಸಾವಿರಕ್ಕೂ ಅಧಿಕ ಶಂಕಿತ ಮಾದರಿ ಪರೀಕ್ಷಿಸಿದಾಗ 242 ಪ್ರಕರಣ ದೃಢಪಟ್ಟಿದೆ. ಕಳೆದ ವರ್ಷ ಇದೇ ಸಮಯಕ್ಕೆ 13,849 ಶಂಕಿತ ಮಾದರಿ ಪರೀಕ್ಷಿಸಿದ್ದು, 3134 ಪ್ರಕರಣ ದೃಢಪಟ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಖಚಿತ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಆದರೆ, ಸೆಪ್ಟೆಂಬರ್ ತಿಂಗಳೊಂದರಲ್ಲೆ 204 ಪ್ರಕರಣಗಳು ಖಚಿತಪಟ್ಟಿವೆ. ಹೀಗಾಗಿ ಶಂಕಿತ ರೋಗಿಗಳಿಗೆ ಸೂಕ್ತ ಚಿಕಿತ್ಸೆ, ಅಗತ್ಯ ಸಲಹೆ- ಸೂಚನೆ, ಚಿಕಿತ್ಸಾ ನಂತರದ ಅನುಸರಣೆ ಮುಂತಾದ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ನಡೆಸಲು ಆರೊಗ್ಯ ಇಲಾಖೆ ಆಯುಕ್ತರು ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಟಾಮಿಫ್ಲೂ ಮಾತ್ರೆ: ಎ (ಖಚಿತಪಟ್ಟಿರುವ) ವರ್ಗಿಕರಣದಲ್ಲಿರುವ ರೋಗಿಗಳ ಬಗ್ಗೆ ತೀವ್ರ ಎಚ್ಚರವಹಿಸಬೇಕು. ತಾಲೂಕು, ಜಿಲ್ಲಾ ಆಸ್ಪತ್ರೆಗಳ ಜತೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಟಾಮಿಫ್ಲೂ ಮಾತ್ರೆ ಸೇರಿ ಅಗತ್ಯ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಬೇಕು. ಎಚ್1ಎನ್1 ಚಿಕಿತ್ಸೆಗೆ ಬೇಕಾದ ಔಷಧಗಳು ಕೊರತೆಯಿದ್ದರೆ ರಾಷ್ಟ್ರೀಯ ಆರೊಗ್ಯ ಅಭಿಯಾನದಲ್ಲಿ ಉಚಿತ ಔಷಧ ವಿತರಣೆ ಮಾಡಲಾಗುವುದು. ಹೀಗಾಗಲೇ ಈ ಸಂಬಂಧ ಅನುದಾನ ಬಿಡುಗಡೆ ಮಾಡಲಾಗಿದ್ದು, ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಯುಕ್ತರು ತಿಳಿಸಿದ್ದಾರೆ.

ಅಗತ್ಯ ಹಣ ಬಿಡುಗಡೆ: ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಪ್ರತಿ ಜಿಲ್ಲಾ ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗಳಿಗೆ ಮೊದಲನೇ ಹಂತದಲ್ಲಿ ತಲಾ 12.5 ಲಕ್ಷ ರೂ., ತಾಲೂಕು ಆಸ್ಪತ್ರೆಗೆ ತಲಾ 5ಲಕ್ಷ ರೂ., ಸಮುದಾಯ ಆರೋಗ್ಯ ಕೇಂದ್ರಗಳಿಗೆ ತಲಾ 1.5 ಲಕ್ಷ ರೂ. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 25 ಸಾವಿರ ರೂ.ಗಳನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News