ಮಂಡ್ಯ: ಪಾದಚಾರಿಗಳ ಮೇಲೆ ಲಾರಿ ಹರಿದು ನಾಲ್ವರು ಸ್ಥಳದಲ್ಲೇ ಮೃತ್ಯು

Update: 2018-10-02 17:03 GMT

ಮಂಡ್ಯ, ಅ.2: ಚಾಲಕನ ನಿಯಂತ್ರಣ ತಪ್ಪಿದ ಲಾರಿ ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಸುಮಾರು 9 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಗರದ ಗುತ್ತಲು ರಸ್ತೆಯಲ್ಲಿ ನಡೆದಿದೆ.

ಕಾಂಗ್ರೆಸ್ ಮುಖಂಡ ಹಾಗೂ ನಗರಸಭೆ ಮಾಜಿ ಸದಸ್ಯ ರಫೀಕ್(40), ಅರಕೇಶ್ವರನಗರದ ಗಿರಿಜಮ್ಮ(48), ಗುತ್ತಲು ಬಡಾವಣೆಯ ರಾಹುಲ್(21) ಹಾಗೂ ಶಶಾಂಕ್(18) ಮೃತಪಟ್ಟಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ.

ಮಂಡ್ಯ ತಾಲೂಕು ಎಲೆಚಾಕನಹಳ್ಳಿಯ ರಾಜೇಶ್(38), ಬೇಲೂರಿನ ಪ್ರಸನ್ನ ಕುಮಾರ್(33), ಮಂಡ್ಯ ಗುತ್ತಲು ಬಡಾವಣೆಯ ಸೈಯ್ಯದ್(14), ಸಾದಾತ್ ಅಲಿ(39), ರಿಝ್ವಾನ(30), ಪುಟ್ಟಸ್ವಾಮಿ(62), ಸಿದ್ಧಾರ್ಥನಗರದ ಕೋಕಿಲ(38), ಬೆಂಗಳೂರಿನ ನಟೇಶ್ ಹಾಗೂ ವೆಂಕಟೇಶ್ ಗಾಯಗೊಂಡವರು.
ನಟೇಶ್ ಮತ್ತು ವೆಂಕಟೇಶ್ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ಮಂಡ್ಯ ವ್ಯದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೆ.ಎಂ.ದೊಡ್ಡಿ ಸಮೀಪದ ಗುಡಿಗೆರೆ ಎಳನೀರು ಮಾರುಕಟ್ಟೆಯಿಂದ ಎಳನೀರು ತುಂಬಿಕೊಂಡು ಮಂಡ್ಯ ಮಾರ್ಗದ ಮೂಲಕ ಗುಲ್ಬರ್ಗಕ್ಕೆ ಹೋಗುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಜನನಿಬಿಡ ಗುತ್ತಲು ರಸ್ತೆಯಲ್ಲಿ ಸುಮಾರು ಮುನ್ನೂರು ಮೀಟರ್ ಅಡ್ಡಾದಿಡ್ಡಿ ಚಲಿಸಿ, ವಿದ್ಯುತ್ ಕಂಬಕ್ಕೆ ಢಿಕ್ಕಿಯೊಡೆದು ನಿಂತಿದೆ. ಈ ಸಂದರ್ಭ ಮಾರ್ಗದಲ್ಲಿ ಬೈಕ್, ಆಟೋ ಹಾಗೂ ಪಾದಚಾರಿಗಳ ಮೇಲೆ ಲಾರಿ ಹರಿದರೆ, ಹಲವರು ಭಯಭೀತರಾಗಿ ಸ್ಥಳದಿಂದ ಓಡಿದರು. ಕೂಡಲೇ ಸ್ಥಳದಲ್ಲೇ ಇದ್ದ ಕೆಲವು ಪೊಲೀಸರು ಮತ್ತು ನಾಗರಿಕರು ಸಾವಿಗೀಡಾದವರು ಮತ್ತು ಗಾಯಗೊಂಡವರನ್ನು ಹತ್ತಿರದ ಜಿಲ್ಲಾಸ್ಪತ್ರೆಗೆ (ಮಿಮ್ಸ್) ಸಾಗಿಸಿದರು. ಅಪಘಾತದ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಜನರು ಸ್ಥಳಕ್ಕೆ ಜಮಾಯಿಸಿದ್ದು, ಇದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲೂ ಹರಸಾಹಸಪಡಬೇಕಾಯಿತು.

ಉದ್ರಿಕ್ತ ಜನರು ಲಾರಿ ಚಾಲಕ ಮಂಡ್ಯದ ಶಂಕರಮಠದ ನದೀಂನ ಮೇಲೆ ಹಲ್ಲೆ ನಡೆಸಲು ಮುಂದಾದಾಗ, ಸ್ಥಳದಲ್ಲೇ ಇದ್ದ ಪೊಲೀಸರು ರಕ್ಷಿಸಿ ವಶಕ್ಕೆ ಪಡೆದುಕೊಂಡರು. ಆಸ್ಪತ್ರೆ ಬಳಿ ಸಾವನ್ನಪ್ಪಿದವರು ಮತ್ತು ಗಾಯಗೊಂಡವರ ಪೋಷಕರ ರೋದನ ಮುಗಿಲುಮುಟ್ಟಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸ್ಥಳೀಯ ಶಾಸಕ ಎಂ.ಶ್ರೀನಿವಾಸ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬದವರು ಹಾಗೂ ಗಾಯಗೊಂಡವರಿಗೆ ಸಾಂತ್ವನ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಅಪರ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಂಚಾರಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News